ನಂದ್ಯಾಲ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಭಾನುವಾರ ನಾಲ್ಕು ಹುಲಿ ಮರಿಗಳು ಪತ್ತೆಯಾಗಿವೆ. ಈ ಹುಲಿ ಮರಿಗಳನ್ನು ತಾಯಿಯ ಬಳಿಗೆ ಸೇರಿಸಲು ಅರಣ್ಯ ಇಲಾಖೆ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಅಂದಾಜು 300 ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಲ್ಲಿನ ಕೊತ್ತಪಲ್ಲಿ ಮಂಡಲದ ಪೆದ್ದ ಗುಮ್ಮದಪುರಂ ಬಳಿ ಈ ನಾಲ್ಕು ಹುಲಿ ಮರಿಗಳು ಕಂಡು ಬಂದಿವೆ. ಕಳೆದ ಭಾನುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲು ಹೋದ ಯುವಕನೊಬ್ಬ ಇವುಗಳನ್ನು ಗಮನಿಸಿದ್ದಾನೆ. ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ನೋಡಲು ತುಂಬಾ ಮುದ್ದಾಗಿರುವ ಈ ಹುಲಿ ಮರಿಗಳನ್ನು ಜನರು ತಮ್ಮ ಗ್ರಾಮಕ್ಕೆ ತಂದಿದ್ದಾರೆ. ಆದರೆ, ಏಕಕಾಲಕ್ಕೆ ನಾಲ್ಕು ಹುಲಿ ಮರಿಗಳು ಕಾಣಿಸಿಕೊಂಡಿದ್ದರಿಂದ ಸ್ಥಳೀಯರಲ್ಲಿ ಆತಂಕವೂ ಮನೆ ಮಾಡಿದೆ. ಸುತ್ತ - ಮುತ್ತಲಿನಲ್ಲೇ ತಾಯಿ ಹುಲಿ ಬರುವ ಭಯ ಸ್ಥಳೀಯರನ್ನು ಕಾಡುತ್ತಿದೆ.
ಮತ್ತೊಂದೆಡೆ, ನಾಲ್ಕು ಹುಲಿ ಮರಿಗಳ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಮೂರು ದಿನಗಳಿಂದ ತಾಯಿ ಹುಲಿಗಾಗಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಇದೇ ವೇಳೆ ಮುಸಲಿಮಡುಗು ಗ್ರಾಮದ ಬಳಿ ಹುಲಿ ಕಂಡಿರುವುದಾಗಿ ಕೆಲ ಕುರಿಗಾಹಿಗಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಇದರ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
300 ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗಿ: ನಾಲ್ಕು ಹುಲಿ ಮರಿಗಳನ್ನು ಅವುಗಳ ತಾಯಿ ಬಳಿಗೆ ಸೇರಿಸಬೇಕು ಮತ್ತು ಜನರಲ್ಲಿರುವ ಹುಲಿಯ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ತಾಯಿ ಹುಲಿಯ ಪತ್ತೆಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಅರಣ್ಯ ಇಲಾಖೆಯ 300 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.