ಕಾನ್ಪುರ (ಉತ್ತರ ಪ್ರದೇಶ): ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ತಮ್ಮ ಹುಟ್ಟೂರಿನ ಪ್ರವಾಸದ ವೇಳೆ ಸಂಚಾರಕ್ಕೆ ತಡೆ ನೀಡಿದ್ದ ಹಿನ್ನೆಲೆ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಲಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಮತ್ತು ಮೂವರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮ್ನಾಥ್ ಕೋವಿಂದ್ ರಸ್ತೆ ಮಾರ್ಗವಾಗಿ ತಮ್ಮ ಹುಟ್ಟೂರು ಕಾನ್ಪುರ ತೆರಳುತ್ತಿದ್ದ ಹಿನ್ನೆಲೆ ರಸ್ತೆ ಸಂಚಾರ ತಡೆಯಲಾಗಿತ್ತು. ಈ ವೇಳೆ, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದ ಭಾರತೀಯ ಕೈಗಾರಿಕಾ ಅಧ್ಯಯನ ಸಂಘ ವಿಭಾಗದ ಮಹಿಳಾ ಅಧ್ಯಕ್ಷೆ ವಂದನಾ ಮಿಶ್ರಾ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೇ ಮೃತಪಟ್ಟಿದ್ದರು. ಅಕಾಲಿಕ ಮರಣದ ಬಗ್ಗೆ ರಾಷ್ಟ್ರಪತಿಗಳು ‘ದುಃಖಿತರಾಗಿದ್ದಾರೆ’ ಎಂದು ಪೊಲೀಸ್ ಆಯುಕ್ತ ಅಸಿಮ್ ಅರುಣ್ ಹೇಳಿದ್ದಾರೆ.