ತ್ರಿಶೂರ್ (ಕೇರಳ):ತ್ರಿಶೂರ್ ಜಿಲ್ಲೆಯ ಪುತ್ತೂರು ಕೈನೂರುನ ಕೆರೆಗೆ ಸ್ನಾನಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಮೃತರನ್ನು ಅರ್ಜುನ್ ಅಲೋಶಿಯಸ್, ಅಬಿ ಜಾನ್, ನಿವೇದ್ ಕೃಷ್ಣ ಮತ್ತು ಜಿಯಾದ್ ಹುಸೇನ್ ಎಂದು ಗುರುತಿಸಲಾಗಿದೆ. ಇವರು ತ್ರಿಶೂರ್‌ನ ಎಲ್ತುರುತ್ ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ತ್ರಿಶೂರ್ ಸೇಂಟ್ ಥಾಮಸ್ ಕಾಲೇಜಿನ ಪದವಿ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ಸಂಭವಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇತ್ತೀಚಿನ ಘಟನೆಗಳು:ಅಕ್ಟೋಬರ್ 10 ರಂದು ದೊಡ್ಡಬಳ್ಳಾಪುರದಲ್ಲಿ ರೈತರೊಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ರಾಮಪುರ ಗ್ರಾಮದ ಕುಮಾರ್ (43) ಎಂಬವರು ದನಗಳ ಮೈ ತೊಳೆಯಲು ಜಾಲಿಕಟ್ಟೆಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದಾಗಿ ಮನೆಯವರು ಜಾಲಿಕಟ್ಟೆಗೆ ಬಳಿ ಬಂದು ನೋಡಿದಾಗ ಚಪ್ಪಲಿ ಕಂಡು ಬಂದಿದ್ದವು. ಆತಂಕಗೊಂಡ ಮನೆಯವರು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ್ದರು. ಆದರೆ ಅಷ್ಟೊತ್ತಿಗೆ ರಾತ್ರಿಯಾಗಿದ್ದು ರೈತನ ಶವ ಹುಡುಕಲು ಸಾಧ್ಯವಾಗಿರಲಿಲ್ಲ. ಅಕ್ಟೋಬರ್ 11ರಂದು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದರು.