ಹೈದರಾಬಾದ್:ಕೋಡಂಗಲ್ ಕ್ಷೇತ್ರದಲ್ಲಿ ಬಿಆರ್ಎಸ್ ಅಭ್ಯರ್ಥಿ ಪಟ್ನಾಮ್ ನರೇಂದ್ರ ರೆಡ್ಡಿ ಜೊತೆಗೆ ನೇರ ಹಣಾಹಣಿಯೊಂದಿಗೆ ಸ್ಪರ್ಧಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಭರ್ಜರಿ ಜಯಗಳಿಸಿದ್ದಾರೆ. ಸುಮಾರು 30,000 ಮತಗಳ ಅಂತರದಿಂದ ನರೇಂದ್ರ ರೆಡ್ಡಿ ವಿರುದ್ಧ ಜಯ ಸಾಧಿಸಿದ್ದಾರೆ.
ತೆಲಂಗಾಣದಲ್ಲಿ ಮುಖ್ಯಮಂತ್ರಿ ಹಾಗೂ ಬಿಆರ್ಎಸ್ ನಾಯಕ ಕೆ. ಚಂದ್ರಶೇಖರ್ ರಾವ್ ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲನಭವಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಸೋಲನಭವಿಸಿದ್ದು, ಬಿಜೆಪಿ ಅಭ್ಯರ್ಥಿ ಕೆ ವೆಂಕಟ ರಮಣ ರೆಡ್ಡಿ 3,514 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇದೇ ವೇಳೆ ಮತ್ತೊಂದು ಕ್ಷೇತ್ರ ಗಜ್ವಾಲ್ನಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಕೆಸಿಆರ್, ಆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮುಖ್ಯಮಂತ್ರಿ ಕೆಸಿಆರ್ ಪುತ್ರ ಕೆ ಟಿ ರಾಮರಾವ್ ಸಿರ್ಸಿಲಾ ಕ್ಷೇತ್ರದಲ್ಲಿ 29,687 ಮತಗಳ ಅಂತರದಿಂದ ಜಯ ಗಳಿಸಿದ್ದರೆ, ಕಾಂಗ್ರೆಸ್ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಮಧಿರ ಕ್ಷೇತ್ರದಲ್ಲಿ 34,779 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಹುಝೂರ್ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಉತ್ತಮ್ ಕುಮಾರ್ ರೆಡ್ಡಿ 44,888 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಬಿಜೆಪಿ ಪ್ರಮುಖ ನಾಯಕ ಬಂಡಿ ಸಂಜಯ್ ಅವರು ಕರೀಂನಗರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.
ಸಿದ್ದಿಪೇಟ್ ಕ್ಷೇತ್ರದಲ್ಲಿ ಬಿಆರ್ಎಸ್ನ ಹರೀಶ್ ರಾವ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಹುಝೂರಾಬಾದ್ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಈಟಲ ರಾಜೇಂದರ್ ಹಿನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಸ್ಪರ್ಧಿಸಿರುವ ಗಜ್ವಾಲ್ ಕ್ಷೇತ್ರದಲ್ಲಿಯೂ ಹಿನ್ನಡೆ ಸಾಧಿಸಿದ್ದಾರೆ.
ಜುಬ್ಲಿಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಈಗ ಹಿನ್ನಡೆ ಸಾಧಿಸಿದ್ದಾರೆ.
ರಾಜಸ್ಥಾನ:
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಜೆಪಿ ಅಭ್ಯರ್ಥಿ ಮಹೇಂದ್ರ ಸಿಂಗ್ ರಾಠೋಡ್ ವಿರುದ್ಧ 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅದ್ಧೂರಿ ಜಯಗಳಿಸಿದ್ದಾರೆ. ಝಾಲರ್ಪಾಠನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮ್ ಲಾಲ್ ಚೌಹಾಣ್ ವಿರುದ್ಧ 48,489 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ.