ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ನಾಯಕ ಜೀತೇಂದ್ರ ರೆಡ್ಡಿ ಅವರ ಮನೆಯಿಂದ ನಾಲ್ವರು ಸಿಬ್ಬಂದಿಯನ್ನು ಅಪಹರಣ ಮಾಡಲಾಗಿದೆ. ರೆಡ್ಡಿ ಅವರ ಕಾರು ಚಾಲಕ ಸೇರಿ ನಾಲ್ವರು ಕಿಡ್ನಾಪ್ ಆಗಿದ್ದು, ಪೊಲೀಸರು ಸಿಸಿವಿಟಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತೆಲಂಗಾಣ-ಆಂಧ್ರಪ್ರದೇಶದ ಮಾಜಿ ಸಂಸದರೂ ಆದ ಜೀತೇಂದ್ರ ರೆಡ್ಡಿ ಅವರ ಮನೆ ದೆಹಲಿಯ ದಕ್ಷಿಣ ಅವೆನ್ಯೂ ಪ್ರದೇಶದಲ್ಲಿ ಇದೆ. ಇದೇ ಮನೆಯಿಂದ ಕಾರಿನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಕಾರು ಚಾಲಕ ತಾಪಾ ಮತ್ತು ಜತೆಗಾರ ಮೂನ್ನೂರು ರವಿ ಸೇರಿ ನಾಲ್ವರು ಸಿಬ್ಬಂದಿಯ ತಲೆಗೆ ಬಂದೂಕು ಇಟ್ಟು ಅಪಹರಿಸಿದ್ದಾರೆ. ಸೋಮವಾರ ರಾತ್ರಿ 8.34ರ ಸುಮಾರಿಗೆ ಈ ಕಿಡ್ನಾಪ್ ನಡೆದಿದೆ ಎನ್ನಲಾಗ್ತಿದೆ.
ಈ ಘಟನೆ ಕುರಿತಂತೆ ಜೀತೇಂದ್ರ ರೆಡ್ಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿಸಿಟಿವಿಯ ದೃಶ್ಯಗಳ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಖಾಸಗಿ ಕಾರಿನ ಚಾಲಕ ತಾಪಾ ಮತ್ತು ಸಾಮಾಜಿಕ ಕಾರ್ಯಕರ್ತ ಮುನ್ನೂರು ರವಿ ಸೇರಿದಂತೆ ನಾಲ್ವರನ್ನು ಅಪಹರಣ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ನ್ಯಾಯ ಕೊಡಿಸುವ ವಿಶ್ವಾಸ ಹೊಂದಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಭೇಟಿಯಾಗಿ ಧೈರ್ಯ ತುಂಬಿದ ಕೇಂದ್ರ ಸಚಿವ ಸಿಂಧಿಯಾ
ಈಗಾಗಲೇ ಸಿಸಿವಿಟಿ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಇದರ ದೃಶ್ಯಾವಳಿ ಆಧಾರದ ಮೇಲೆ ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ.