ಸಾಂಗ್ಲಿ(ಮಹಾರಾಷ್ಟ್ರ):ಮಕ್ಕಳ ಕಳ್ಳರೆಂದು ಶಂಕೆ ವ್ಯಕ್ತಪಡಿಸಿ, ನಾಲ್ವರು ಸಾಧುಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ನಾಲ್ವರ ಮೇಲೆ ಅಮಾನವೀಯ ರೀತಿಯಲ್ಲಿ ಥಳಿಸುತ್ತಿರುವ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಮಾನುಷವಾಗಿ ಥಳಿತಕ್ಕೊಳಗಾಗಿರುವ ಸಾಧುಗಳು ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದ್ದು, ಇವರೆಲ್ಲರೂ ಕರ್ನಾಟಕದ ಮೂಲಕ ಪಂಢರಪುರಕ್ಕೆ ಹೋಗುತ್ತಿದ್ದರು ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನೂರಾರು ಜನರ ಸಮ್ಮುಖದಲ್ಲಿ ಕಿರಾಣಿ ಅಂಗಡಿವೊಂದರ ಮುಂದೆ ಕೋಲುಗಳಿಂದ ಥಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಮ್ ತಿಳಿಸಿದ್ದು, ವೈರಲ್ ವಿಡಿಯೋ ಆಧಾರದ ಮೇಲೆ ಪ್ರಕರಣದ ಪರಿಶೀಲನೆ ನಡೆಸಲಾಗ್ತಿದೆ ಎಂದಿದ್ದಾರೆ. ನಾಲ್ವರು ಸಾಧುಗಳ ಬಳಿ ಆಧಾರ್ ಕಾರ್ಡ್ ಇದ್ದು, ಸಂಬಂಧಿಕರ ಮೊಬೈಲ್ ನಂಬರ್ ಸಹ ನೀಡಿದ್ದಾರೆ. ಇವರೆಲ್ಲರೂ ಉತ್ತರ ಪ್ರದೇಶದ ಮಥುರಾದಲ್ಲಿ ವಾಸವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.