ವಿಜಯವಾಡ:ವಿಶಾಖಪಟ್ಟಣ ಜಿಲ್ಲೆಯ ಅರಕು ಘಾಟ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಏಳು ವರ್ಷದ ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.
ವಿಶಾಖಪಟ್ಟಣದ ಅನಂತಗಿರಿ ಬಳಿ ಖಾಸಗಿ ಬಸ್ ಕಣಿವೆಗೆ ಉರುಳಿ ಬಿದ್ದಿದೆ. ಮೃತರೆಲ್ಲರೂ ಹೈದರಾಬಾದ್ ಮೂಲದವರಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ವಿಶಾಖಪಟಣದ ಎಸ್‌ಪಿ ಕೃಷ್ಣ ರಾವ್ ಹೇಳಿದ್ದಾರೆ.
ಸುಮಾರು 17 ಪ್ರವಾಸಿಗರು ತೆಲಂಗಾಣದವರು ಎಂದು ತಿಳಿದುಬಂದಿದೆ. ಅರಕು ಕಣಿವೆಗೆ ಭೇಟಿ ನೀಡಿದ ನಂತರ ವಿಶಾಖಪಟ್ಟಣಕ್ಕೆ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಕನಿಷ್ಠ 100 ಅಡಿಗಳಷ್ಟು ಆಳವಿರುವ ಘಾಟ್ ಕಣಿವೆಗೆ ಬಿದ್ದಿದೆ.
ಎಸ್ ಕೋಟಾದಿಂದ 30 ಕಿ.ಮೀ ದೂರದಲ್ಲಿರುವ ಅನಂತಗಿರಿ ಮಂಡಲದ ಡುಮುಕು ಮತ್ತು ಟೈಡಾ ನಡುವೆ ಈ ಅಪಘಾತ ಸಂಭವಿಸಿದೆ. ಪ್ರವಾಸಿಗರ ಸಂಬಂಧಿಕರು ಮಾಹಿತಿಗಾಗಿ ಅವರನ್ನು ಸಂಪರ್ಕಿಸಲು ವಿಶಾಖಪಟ್ಟಣದ ಜಿಲ್ಲಾ ಅಧಿಕಾರಿಗಳು ಸಹಾಯವಾಣಿ ಕೇಂದ್ರ ತೆರಿದಿದ್ದಾರೆ. ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಎಸ್ ಕೋಟಾದ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.