ಅನಂತಪುರ, ಆಂಧ್ರಪ್ರದೇಶ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು ಬೆಳಗಿನ ಜಾವ ಗರ್ಲದಿನ್ನೆ ತಾಲೂಕಿನ ಕಲ್ಲೂರಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅಕ್ಕಿಯ ಲೋಡ್ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಖಾಸಗಿ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಗುತ್ತಿ ತಾಲೂಕಿನ ಮಾಮಿದೂರಿನ ಚಿನ್ನತಿಪ್ಪಯ್ಯ (45), ಶ್ರೀರಾಮುಲು (45), ನಾಗಾರ್ಜುನ (30) ಮತ್ತು ಶ್ರೀನಿವಾಸುಲು (30) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಬಸ್ ಚಾಲಕ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಅಪಘಾತ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಳಿಕ ಮೃತರ ಸಂಬಂಧಿಕರು, ಸರಕಾರ ಕೂಡಲೇ ಘಟನೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಹೇಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಧರಣಿ ನಡೆಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸದಂತೆ ತಡೆಯಲಾಗಿತ್ತು. ಇದರಿಂದಾಗಿ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನ ದಟ್ಟನೆ ಉಂಟಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಇತ್ತೀಚಿನ ಘಟನೆಗಳು: ಕ್ವಾಲಿಸ್ ಕಾರು ಮತ್ತು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಗ್ಪುರ ಸಮೀಪ ಕಳೆದ ವಾರ ಸಂಭವಿಸಿತ್ತು. ಮದುವೆ ಸಮಾರಂಭದಿಂದ ಹಿಂತಿರುಗುತ್ತಿರುವಾಗ ಈ ದುರಂತ ನಡೆದಿತ್ತು.