ಜೋಧ್ಪುರ (ರಾಜಸ್ಥಾನ) : ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಸಜೀವ ದಹನವಾಗಿರುವ ಘಟನೆ ಶಾಸ್ತ್ರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರನ್ನು ಸುಭಾಷ್ ಚೌಧರಿ (81), ನೀಲಂ ಚೌಧರಿ (76), ಪಲ್ಲವಿ ಚೌಧರಿ (50) ಮತ್ತು ಲಾವಣ್ಯ ಚೌಧರಿ (40) ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಭಾನುವಾರ ಸಂಜೆ ಐದು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ರಾತ್ರಿ 9 ಗಂಟೆಗೆ ಹೊಗೆ ಜತೆಗೆ ವಾಸನೆಯೂ ಬಂತು. ಎಲ್ಲರೂ ಹೋಗಿ ನೋಡುವ ವೇಳೆಗೆ ಒಂದೇ ಕೋಣೆಯಲ್ಲಿ ಸುಟ್ಟುಕರಕಲಾದ ರೀತಿಯಲ್ಲಿ ನಾಲ್ವರ ಮೃತದೇಹಗಳಿದ್ದವು ಎಂದಿದ್ದಾರೆ.