ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ವಿಶ್ವದ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಕಾರ್ಯಾರಂಭ - ಉತ್ತರಾಖಂಡ್​ನ ನೈನಿತಾಲ್​​

ಎಂಟು ದೇಶಗಳ ನೆರವಿನೊಂದಿಗೆ ಈ ಅಂತಾರಾಷ್ಟ್ರೀಯ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಯೋಜನೆ ಆರಂಭಿಸಲಾಗಿದೆ. ಇದು ನಕ್ಷತ್ರಪುಂಜಗಳು, ಬಾಹ್ಯಾಕಾಶ ಅವಶೇಷಗಳ ಅಧ್ಯಯನ ಮಾಡಲು ಪ್ರಯೋಜನಕಾರಿಯಾಗಿದೆ.

four-meter-diameter-liquid-mirror-telescope-installed-in-nainital
ಭಾರತದಲ್ಲಿ ವಿಶ್ವದ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಕಾರ್ಯಾರಂಭ

By

Published : Jun 3, 2022, 8:39 PM IST

ನೈನಿತಾಲ್ (ಉತ್ತರಾಖಂಡ್​​): ಖಗೋಳ ವಿಜ್ಞಾನ ಕ್ಷೇತ್ರದಲ್ಲಿಆರ್ಯಭಟ್ಟ ಸಂಶೋಧನಾ ಸಂಸ್ಥೆ (ಎಆರ್‌ಐಇಎಸ್) ಐತಿಹಾಸಿಕ ಸಾಧನೆ ಮಾಡಿದೆ. ಉತ್ತರಾಖಂಡ್​ನ ನೈನಿತಾಲ್​​ನಲ್ಲಿರುವ ದೇವಸ್ಥಾಳ್​​ನಲ್ಲಿ ವಿಶ್ವದ ಮೊದಲ ಇಂಟರ್​​ನ್ಯಾಷನಲ್ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ (ಐಎಲ್​​​ಎಂಟಿ) ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಒಂದು ತಿಂಗಳ ಅಧ್ಯಯನದ ನಂತರ ಈ ಟೆಲಿಸ್ಕೋಪ್​​ ಮೂಲಕ ತೆಗೆದ ಬಾಹ್ಯಾಕಾಶದ ಮೊದಲ ಚಿತ್ರವನ್ನೂ ವಿಜ್ಞಾನಿಗಳು ಪ್ರಸ್ತುತಪಡಿಸಿದ್ದಾರೆ.

50 ಕೋಟಿ ರೂ. ವೆಚ್ಚದಲ್ಲಿ ಈ ಪ್ರಥಮ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಸ್ಥಾಪಿಸಲಾಗಿದ್ದು, ಮೊದಲ ಹಂತದಲ್ಲೇ ಸಾವಿರಾರು ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗೆಲಾಕ್ಸಿ ಹಾಗೂ ನಕ್ಷತ್ರಗಳ ಚಿತ್ರಗಳನ್ನು ತೆಗೆಯುವ ಮೂಲಕ ದಾಖಲೆ ನಿರ್ಮಿಸಿದೆ. ಈ ಲಿಕ್ವಿಡ್ ಟೆಲಿಸ್ಕೋಪ್‌ನ ಸಹಾಯದಿಂದ ನಕ್ಷತ್ರಪುಂಜದಲ್ಲಿನ ದೈನಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬಹುದು ಎಂದು ಎಆರ್‌ಐಇಎಸ್ ನಿರ್ದೇಶಕ ಪ್ರೊ.ದೀಪಂಕರ್ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

ಎಂಟು ದೇಶಗಳ ನೆರವು: 2017ರಲ್ಲಿ ಬೆಲ್ಜಿಯಂ, ಕೆನಡಾ, ಪೋಲೆಂಡ್, ಉಜ್ಬೇಕಿಸ್ತಾನ್ ಸೇರಿದಂತೆ ಎಂಟು ದೇಶಗಳ ನೆರವಿನೊಂದಿಗೆ ಅಂತಾರಾಷ್ಟ್ರೀಯ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಯೋಜನೆಯನ್ನು ಎಆರ್‌ಐಇಎಸ್ ಆರಂಭಿಸಿತ್ತು. ಆದರೆ, ಕೋವಿಡ್​​ ಕಾರಣದಿಂದಾಗಿ ಇದರ ಕಾರ್ಯಾಚರಣೆಯಲ್ಲಿ ವಿಳಂಬವಾಗಿತ್ತು. ಇದೀಗ ಕಳೆದ ತಿಂಗಳಿನಿಂದ ಮಿರರ್ ಟೆಲಿಸ್ಕೋಪ್ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.

ಸಾಂಪ್ರದಾಯಿಕ ಟೆಲಿಸ್ಕೋಪ್‌ಗೆ ಹೋಲಿಸಿದರೆ ಈ ಟೆಲಿಸ್ಕೋಪ್ ದೊಡ್ಡದಾಗಿದೆ. ಇದರಿಂದ ಲೆನ್ಸ್​ ಸ್ವಚ್ಛಗೊಳಿಸುವ ಮತ್ತು ಅದರ ನಿರ್ವಹಣೆಯ ಸಮಯವೂ ಉಳಿತಾಯವಾಗುತ್ತದೆ. ಈ ಟೆಲಿಸ್ಕೋಪ್​​ನಲ್ಲಿ ಮೊದಲ ಬಾರಿಗೆ ಪಾದರಸವನ್ನು (ಮರ್ಕ್ಯುರಿ) ದ್ರವ ರೂಪದಲ್ಲಿ ಬಳಸಲಾಗಿದೆ.

ಈ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ನಕ್ಷತ್ರಪುಂಜಗಳು, ಬಾಹ್ಯಾಕಾಶ ಅವಶೇಷಗಳ ಅಧ್ಯಯನ ಮಾಡಲು ಪ್ರಯೋಜನಕಾರಿಯಾಗಿದೆ. ಮೊದಲ ಹಂತದಲ್ಲಿಯೇ 95 ಸಾವಿರ ಜ್ಯೋತಿರ್ವರ್ಷಗಳ ದೂರದಲ್ಲಿರುವ ಎನ್​ಜಿಸಿ 4274 ನಕ್ಷತ್ರಪುಂಜದ ಸ್ಪಷ್ಟ ಚಿತ್ರ ತೆಗೆಯುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಮತ್ತೊಬ್ಬ ವಿಜ್ಞಾನಿ ಡಾ.ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಅಭಿವೃದ್ದಿಯಾಗ್ತಿದೆ 'ಆಕಾಶದಲ್ಲಿ ಹಾರುವ ಟ್ಯಾಕ್ಸಿ'... 2024ರಿಂದ ಕಾರ್ಯಾರಂಭ ಸಾಧ್ಯತೆ!

ABOUT THE AUTHOR

...view details