ಕಾಮರೆಡ್ಡಿ(ತೆಲಂಗಾಣ): ವಿದ್ಯುತ್ ಶಾಕ್ ಹೊಡೆದು ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನೊಂದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಇಂಥದ್ದೊಂದು ಹೃದಯವಿದ್ರಾವಕ ಘಟನೆ ಇಲ್ಲಿನ ಬೀಡಿ ವರ್ಕರ್ಸ್ ಕಾಲೋನಿಯಲ್ಲಿ ನಡೆದಿದೆ.
ಆಟೋ ಚಾಲಕನಾದ ಕಾಲೋನಿಯ ಅಹಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6), ಮಕ್ಕಳಾದ ಫೈಜಾನ್ (5) ಮತ್ತು ಅದ್ನಾನ್ (3) ಸಣ್ಣ ಹುಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದರು. ಮಳೆ ಕಾರಣಕ್ಕೆ ಮಂಗಳವಾರ ಶಾಲೆಗೆ ರಜೆ ನೀಡಲಾಗಿತ್ತು. ಫೈಜಾನ್ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು, ಉಳಿದವರು ಮನೆಯಲ್ಲಿದ್ದರು.
ಮನೆಗೋಡೆಗೆ ಕಟ್ಟಿದ್ದ ಕಬ್ಬಿಣದ ತಂತಿ ಮೇಲೆ ಬಟ್ಟೆ ಒಣಗಿಸುತ್ತಿದ್ದಾಗ ಪರ್ವೀನ್ಗೆ ವಿದ್ಯುತ್ ಸ್ಪರ್ಶಿಸಿದೆ. ಕೂಡಲೇ ಆಕೆಯನ್ನು ರಕ್ಷಿಸಲು ಧಾವಿಸಿದ ಅಹಮದ್ಗೂ ಶಾಕ್ ಹೊಡೆದಿದೆ. ತಂದೆ-ತಾಯಿ ಕುಸಿದು ಬೀಳುವುದನ್ನು ಕಂಡ ಮಗಳು ಮಹೀಮ್ ಮತ್ತು ಮಗ ಅದ್ನಾನ್ ಇಬ್ಬರು ಜೋರಾಗಿ ಕಿರುಚುತ್ತಾ ಪೋಷಕರ ಬಳಿ ಹೋಗಿದ್ದಾರೆ. ಆಗ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ. ಹೀಗೆ ಒಬ್ಬರ ಬಳಿಕ ಮತ್ತೊಬ್ಬರಂತೆ ವಿದ್ಯುತ್ ತಗಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು.