ಕೊಲ್ಲಂ (ಕೇರಳ): ಕೇರಳದಲ್ಲಿಂದು ಭಾರಿ ದುರಂತವೊಂದು ಸಂಭವಿಸಿದೆ. ಕೊಲ್ಲಂನ ಕುಂದಾರದಲ್ಲಿ ಬಾವಿ ತೋಡುವಾಗ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೆರುಂಪುಳ ಕೋವಿಲ್ಮುಕ್ಕುವಿನಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಕುಂದಾರ ಮೂಲದ ಎಲ್ಲಾ ರಾಜನ್, ಸೋಮರಾಜನ್, ಶಿವಪ್ರಸಾದ್ ಮತ್ತು ಮನೋಜ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಮಾಡುವಾಗ ಅಗ್ನಿಶಾಮಕ ಅಧಿಕಾರಿ ಕೂಡ ಕುಸಿದು ಬಿದ್ದಿದ್ದಾರೆ.
ತಿರುವನಂತಪುರಂ ಮೂಲದ ವ್ಯಕ್ತಿ ಮನೆ ನಿರ್ಮಾಣ ಮಾಡುತ್ತಿದ್ದು, ಈ ಹಿನ್ನೆಲೆ ಹೊಸ ಬಾವಿಯನ್ನು ತೋಡಿಸುತ್ತಿದ್ದ. ಈ ವೇಳೆ ಇಬ್ಬರು ಕಾರ್ಮಿಕರು ಸುಮಾರು 100 ಅಡಿ ಆಳದ ಕಿರಿದಾದ ಬಾವಿಗೆ ಇಳಿದಿದ್ದಾರೆ. ಆಗ ಅವರಿಗೆ ಉಸಿರಾಟದ ತೊಂದರೆ ಆದಾಗ ಅವರನ್ನು ರಕ್ಷಣೆ ಮಾಡಲು ಮತ್ತಿಬ್ಬರು ಕೆಳಗಿಳಿದಿದ್ದಾರೆ. ದುರಾದೃಷ್ಟವಶಾತ್ ನಾಲ್ವರೂ ಉಸಿರುಗಟ್ಟಿ ಕುಸಿದುಬಿದ್ದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಅವರನ್ನು ಮೇಲೆ ಎತ್ತಿಕೊಂಡು ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೂ ಅವರನ್ನು ಪ್ರಾಣಾಪಾಯದಿಂದ ಕಾಪಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.