ಕರ್ನಾಟಕ

karnataka

ETV Bharat / bharat

Indo-Bangla border: ಗಡಿ ಬೇಲಿ ಹಾಕಲು ಬಾಂಗ್ಲಾದೇಶ ಆಕ್ಷೇಪ; ಅಸ್ಸಾಂನ 4 ಕಿಮೀ ವ್ಯಾಪ್ತಿ ಅಕ್ರಮ ವಲಸಿಗರಿಗೆ ಮುಕ್ತ ಮುಕ್ತ!

ಈಶಾನ್ಯ ರಾಜ್ಯ ಅಸ್ಸಾಂ ಗಡಿಯಲ್ಲಿ ವಲಸಿಗರ ತಡೆಗೆ ಹಾಕಬೇಕಿದ್ದ ಗಡಿ ಬೇಲಿಗೆ ಬಾಂಗ್ಲಾದೇಶ ಅಡ್ಡಿಪಡಿಸಿದೆ.

ಬಾಂಗ್ಲಾ ಭಾರತ ಗಡಿ
ಬಾಂಗ್ಲಾ ಭಾರತ ಗಡಿ

By

Published : Jul 2, 2023, 10:21 AM IST

ಗುವಾಹಟಿ:ಅಕ್ರಮವಲಸೆ ತಡೆಯಲು ಭಾರತ- ಬಾಂಗ್ಲಾದೇಶ ದೇಶಗಳು ಅಸ್ಸಾಂ ಒಪ್ಪಂದ ಮಾಡಿಕೊಂಡಿವೆ. ಆದರೆ, ಅನುಷ್ಠಾನ ಮಾತ್ರ ಆಗಿಲ್ಲ. ಪ್ರತಿ ಸರ್ಕಾರಗಳು ಈ ವಿಚಾರವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು ಸಂಕಷ್ಟ ಅನುಭವಿಸುತ್ತಿರುವುದು ಮಾತ್ರ ರಾಜ್ಯದ ಜನರು. ಇಂದಿಗೂ ಗಡಿ ಒಳನುಸುಳುವಿಕೆ ನಿಂತಿಲ್ಲ. ಕರೀಂಗಂಜ್​ ಭಾಗದಲ್ಲಿ 4 ಕಿ.ಮೀ ವ್ಯಾಪ್ತಿಯಲ್ಲಿ ಇನ್ನೂ ಗಡಿ ಬೇಲಿ ಹಾಕಲಾಗಿಲ್ಲ. ಇದು ವಲಸೆಗೆ ರಹದಾರಿ ಒದಗಿಸಿದೆ. ಗಡಿ ಬೇಲಿ ಹಾಕದಿರಲು ಬಾಂಗ್ಲಾದೇಶದ ಒತ್ತಡವೇ ಕಾರಣವಾಗಿದೆ.

ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಸೀಲಿಂಗ್​ ಬಹುತೇಕ ಪೂರ್ಣಗೊಂಡಿದ್ದರೆ, ಕರೀಂಗಂಜ್ ಜಿಲ್ಲೆಯ 4 ಕಿಲೋಮೀಟರ್ ಪ್ರದೇಶವು ಇಂದಿಗೂ ಮುಕ್ತವಾಗಿದೆ. ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ (ಎನ್‌ಬಿಸಿಸಿ) 2009ರಲ್ಲಿ ಕರೀಮ್‌ಗಂಜ್ ಪಟ್ಟಣದಿಂದ ಕುಶಿಯಾರಾ ನದಿಯ ಗಡಿ ಪ್ರದೇಶಗಳಲ್ಲಿ ಮುಳ್ಳುತಂತಿ ಬೇಲಿಯನ್ನು ಹಾಕಲು ಪ್ರಾರಂಭಿಸಿತು. ಆದರೆ, ಅದು ಇಂದಿಗೂ ಸಾಕಾರವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ನದಿಯ ದಡದಲ್ಲಿ ನೆಲೆಸಿರುವ ವಲಸಿಗರ ಸ್ಥಳಾಂತರ ಮಾಡದೇ ಇರುವುದು.

ಗಡಿ ಭಾಗದಲ್ಲಿ ನೆಲೆಸಿರುವ ಜನರ ಸ್ಥಳಾಂತರಕ್ಕೆ ಸೂಚಿಸಿ ಆರ್ಥಿಕ ನೆರವೂ ನೀಡಲಾಗಿದೆ. ಆದರೆ ಜರನು ಮಾತ್ರ ಅಲ್ಲಿಂದ ಕಾಲ್ಕಿತ್ತಿಲ್ಲ. ಹೀಗಾಗಿ 4 ಕಿಲೋಮೀಟರ್‌ಗಳಷ್ಟು ಬೇಲಿ ಹಾಕುವುದು ಹಾಗೆಯೇ ಉಳಿದುಕೊಂಡಿದೆ. ಗಡಿಯಿಂದ 150 ಗಜಗಳ ಅಂತರದಲ್ಲಿ ಮುಳ್ಳುತಂತಿ ಬೇಲಿಗಳನ್ನು ಹಾಕಬೇಕು. ಆದರೆ, ನದಿಯ ದಡದಲ್ಲಿ ಜನರು ವಾಸಿಸುತ್ತಿರುವ ಕಾರಣ 150 ಗಜದ ಬದಲು ಬೇಲಿಗಳ ಅಂತರವನ್ನು 50 ಗಜಗಳವರೆಗೆ ಕಡಿಮೆ ಮಾಡಲಾಗಿದೆ. ಈ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶ ಸರ್ಕಾರಗಳು ಚರ್ಚಿಸಿ ನಿರ್ಧಾರ ಕೈಗೊಂಡಿದ್ದವು. ಆ ನಂತರವೂ ಬೇಲಿ ಹಾಕುವ ಪ್ರಕ್ರಿಯೆ ಮಾತ್ರ ಮುನ್ನೆಲೆಗೆ ಬರಲಿಲ್ಲ.

ಬೇಲಿ, ಗೋಡೆ ನಿರ್ಮಾಣಕ್ಕೆ ಆಕ್ಷೇಪ:ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ಸ್ಥಳಾಂತರಕ್ಕೆ ಹಣಕಾಸಿನ ನೆರವು ಪಡೆದಿದ್ದಾರೆ. ಆದರೆ, ಅವರು ಅಲ್ಲಿಂದ ವರ್ಗವಾಗಿಲ್ಲ. ಇತ್ತ ಎನ್​ಬಿಸಿಸಿ ಆ ಪ್ರದೇಶಲ್ಲಿ ಎತ್ತರದ ಕಾವಲು ಗೋಡೆಯನ್ನು ನಿರ್ಮಿಸಲು ಮುಂದಾದಾಗ ಬಾಂಗ್ಲಾದೇಶ ಅದಕ್ಕೆ ತಕರಾರು ಸಲ್ಲಿಸಿತು. ಗಡಿ ಬೇಲಿಯನ್ನು 150 ಗಜಗಳ ಬದಲು 50 ಗಜಗಳಿಗೆ ಇಳಿಸಿದ್ದರಿಂದ ನದಿಯ ದಡದಲ್ಲಿ ಕಾವಲು ಗೋಡೆ ನಿರ್ಮಿಸದೇ ಬೇಲಿ ಹಾಕುವುದು ಸಾಧ್ಯವಿರಲಿಲ್ಲ. ಹಾಗಾಗಿ ಎತ್ತರಕ್ಕೆ ಕಾವಲು ಗೋಡೆ ನಿರ್ಮಿಸಿ ಅದರ ಮೇಲೆ ತಂತಿಬೇಲಿ ನಿರ್ಮಿಸುವ ಕಾರ್ಯ 2017ರಲ್ಲಿ ಶುರು ಮಾಡಲಾಗಿತ್ತು.

ಆದರೆ, ಈ ಕೆಲಸ ಆರಂಭವಾದ ಕೂಡಲೇ ಬಾಂಗ್ಲಾದೇಶದಿಂದ ನಿರ್ಬಂಧ ಹೇರಲಾಯಿತು. ನದಿ ಪ್ರದೇಶದಲ್ಲಿ ಕಾವಲು ಗೋಡೆಯನ್ನು ಎತ್ತರವಾಗಿ ನಿರ್ಮಿಸಿದರೆ ಮಳೆಗಾಲದಲ್ಲಿ ನೀರು ಬಾಂಗ್ಲಾದೇಶದೊಳಕ್ಕೆ ಹರಿಯುತ್ತದೆ. ಈ ಆತಂಕದಿಂದಾಗಿ ಗೋಡೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿತು. ಕಾವಲುಗೋಡೆ ಕಟ್ಟಿದರೂ ಅದು ಎತ್ತರವಾಗಿರದಂತೆ ನಿರ್ಮಿಸಿ, ಅದರ ಮೇಲೆ ಮುಳ್ಳುಬೇಲಿ ಹಾಕಬೇಕು ಎಂದು ವಾದಿಸಿತು. ಆದರೆ ಎತ್ತರದ ಗೋಡೆ ಇಲ್ಲದೇ ನದಿ ಪಾತ್ರದಲ್ಲಿ ಬೇಲಿ ಅಳವಡಿಸಲು ಸಾಧ್ಯವಿಲ್ಲವಾಗಿದೆ.

ಬಾಂಗ್ಲಾದೇಶದ ಅಡ್ಡಿಯಿಂದಾಗಿ ಗಡಿ ಬೇಲಿ ಹಾಕುವ ಕೆಲಸ ಮುಂದೂಡಲ್ಪಟ್ಟಿದೆ. ಗಡಿಯ 4 ಕಿಲೋಮೀಟರ್ ಪ್ರದೇಶ ಈ ಕಾರಣಕ್ಕಾಗಿ ಬಂದೋಬಸ್ತ್​ ಮಾಡಲಾಗಿಲ್ಲ. 150 ಗಜ ಅಂತರದಲ್ಲಿ ತಂತಿಬೇಲಿ ಹಾಕಿದರೆ, ಕಾವಲು ಗೋಡೆ ನಿರ್ಮಿಸುವ ಅಗತ್ಯವಿಲ್ಲ. ಹಾಗೆ ಮಾಡಬೇಕಾದಲ್ಲಿ ಮೊದಲು ಅಲ್ಲಿ ನೆಲೆಸಿರುವ ಜನರನ್ನು ಮೊದಲು ಬೇರೆಡೆಗೆ ಸ್ಥಳಾಂತರಿಸಬೇಕು.

ಪರಿಹಾರ ಪಡೆದರೂ ಸ್ಥಳ ಬಿಡಲಿಲ್ಲ:ಜನರ ಸ್ಥಳಾಂತರಿಸಲು ಸರ್ಕಾರ ಈಗಾಗಲೇ 18.56 ಕೋಟಿ ರೂಪಾಯಿ ಪರಿಹಾರವನ್ನು ನೀಡಿದೆ. ಇಷ್ಟಾದರೂ ಜನರು ಬೇರೆಡೆಗೆ ಸ್ಥಳಾಂತರಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಸ್ಥಳೀಯ ಆಡಳಿತ ಕೂಡ ಏನೂ ಮಾಡದೇ ಕೈಕಟ್ಟಿ ಕೂತಿದೆ. ಈ ಬಗ್ಗೆ ಭಾರತ ಸರ್ಕಾರ, ಬಾಂಗ್ಲಾದೊಂದಿಗೆ ಮಾತುಕತೆ ನಡೆಸಬೇಕಿದೆ. ಮುಕ್ತವಾಗಿರುವ 4 ಕಿಲೋಮೀಟರ್ ಪ್ರದೇಶವನ್ನು ಬೇಲಿಯಿಂದ ಬಂದೋಬಸ್ತ್​ ಮಾಡಬೇಕು. ಇಲ್ಲವಾದಲ್ಲಿ ನುಸುಳುಕೋರರಿಂದ ಅಸ್ಸಾಂಗೆ ಅಪಾಯವಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಇದನ್ನೂ ಓದಿ:Manipur conflict: 'ಪೂರ್ವಯೋಜಿತ ಕೃತ್ಯದಂತೆ ಕಾಣುತ್ತಿದೆ..': ಮಣಿಪುರ ಹಿಂಸಾಚಾರಕ್ಕೆ ವಿದೇಶಿ ಕೈವಾಡದ ಸುಳಿವು ನೀಡಿದ ಸಿಎಂ ಬಿರೇನ್ ಸಿಂಗ್

ABOUT THE AUTHOR

...view details