ಅಜ್ಮೀರ್ (ರಾಜಸ್ಥಾನ): ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಈ ಡಿಕ್ಕಿಯ ನಂತರ ಭಾರೀ ಸ್ಫೋಟವಾಗಿ ಬೆಂಕಿ ಹೊತ್ತಿಕೊಂಡಿದೆ. ಸುಮಾರು 500 ಮೀಟರ್ ದೂರದಲ್ಲಿ ನಿಂತಿದ್ದ ಟ್ರಕ್ಗೂ ಬೆಂಕಿ ಹರಡಿದೆ. ಚಾಲಕರಿಬ್ಬರೂ ಸೇರಿ ನಾಲ್ವರು ಸುಟ್ಟು ಕರಕಲಾಗಿದ್ದಾರೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ತಡರಾತ್ರಿ ಎಲ್‌ಪಿಜಿ ಇಂಧನ ತುಂಬಿದ್ದ ಗ್ಯಾಸ್ ಟ್ಯಾಂಕರ್ ಹಾಗೂ ಮಾರ್ಬಲ್ ತುಂಬಿದ್ದ ಟ್ರಕ್ ಮಧ್ಯೆ ಡಿಕ್ಕಿ ಹೊಡೆದು ಈ ದುರಂತ ಜರುಗಿದೆ. ಸುಂದರ್, ಸುಭಾಷ್, ಅಜಿನಾ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಗ್ಯಾಸ್ ಟ್ಯಾಂಕರ್ನಲ್ಲಿ ಮೂರು ಚೇಂಬರ್ ಗ್ಯಾಸ್ ಇತ್ತು. ಈ ಅಪಘಾತದಿಂದಾಗಿ ಈ ಗ್ಯಾಸ್ ಚೇಂಬರ್ಗಳು ಒಂದರ ನಂತರ ಒಂದು ಹೊತ್ತಿಕೊಂಡಿದೆ. ಇದೇ ವೇಳೆ ಮಾರ್ಬಲ್ ತುಂಬಿದ್ದ ಟ್ರಕ್ ಕೂಡ ಉರಿಯಲು ಪ್ರಾರಂಭಿಸಿದ್ದು, ಒಟ್ಟು ಮೂರು ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಚ್ಚಿ ಬಿದ್ದ ಸ್ಥಳೀಯರು: ಈ ಅಗ್ನಿ ಜಾಲ್ವೆಯು ಸಮೀಪದ ಜಮೀನುಗಳು ಮತ್ತು ಅಂಗಡಿಗಳಿಗೂ ಹಬ್ಬಿಕೊಂಡಿದೆ. ಇದಲ್ಲದೇ ಮನೆಯೊಂದರಲ್ಲಿ ಇಟ್ಟಿದ್ದ ಮೇವಿಗೆ ಬೆಂಕಿ ಬಿದ್ದಿದೆ. ಇದರಿಂದ ಐದರಿಂದ ಆರು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಜೊತೆಗೆ ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಐದು ಬೈಕ್‌ಗಳು ಸುಟ್ಟು ಹೋಗಿವೆ. ತಡರಾತ್ರಿ ನಡೆದ ಅವಘಡದಿಂದ ಬೆಚ್ಚಿ ಬಿದ್ದ ಸ್ಥಳೀಯರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಬಾವಿಯಿಂದ ನೀರನ್ನು ಸೇದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.