ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಸೇನಾ ವಾಹನದ ಮೇಲೆ ಅಪರಿಚಿತ ಭಯೋತ್ಪಾದಕರು ಗ್ರೆನೇಡ್ ಎಸೆದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿಂದು ನಡೆದಿದೆ. ಇದರಿಂದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಯೋಧರು ಹುತಾತ್ಮರಾಗಿದ್ದಾರೆ.
ಇಲ್ಲಿನ ಭಟ ಧುರಿಯನ್ ಪ್ರದೇಶದ ಹೆದ್ದಾರಿಯಲ್ಲಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ಸೇನಾ ವಾಹನ ತೆರಳುತ್ತಿತ್ತು. ಈ ವೇಳೆ ಏಕಾಏಕಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಐವರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೇನಾಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದರು.
ಆದರೆ, ಇದೀಗ ಅಪರಿಚಿತ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮವೇ ಸೇನಾ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಭಯೋತ್ಪಾದಕ ನಿಗ್ರಹದಲ್ಲಿ ತೊಡಗಿದ್ದ ರಾಷ್ಟ್ರೀಯ ರೈಫಲ್ಸ್ ಪಡೆಯ ಐವರು ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.
ಮತ್ತೊಂದೆಡೆ, ಈ ಮೊದಲು ಘಟನೆಗೆ ಸಂಬಂಧಿಸಿದ ವಿಡಿಯೋ ಲಭ್ಯವಾಗಿತ್ತು. ಇದರಲ್ಲಿ ಯೋಧರ ಮೃತದೇಹಗಳು ವಾಹನದ ಪಕ್ಕದಲ್ಲಿಯೇ ಬಿದ್ದಿರುವುದು ಮತ್ತು ಸೇನಾ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿತ್ತು. ಅಲ್ಲದೇ, ಘಟನೆಯ ನಂತರ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ:2002ರ ನರೋಡಾ ಹತ್ಯಾಕಾಂಡ: ಮಾಯಾ ಕೊಡ್ನಾನಿ ಸೇರಿ ಎಲ್ಲ 67 ಆರೋಪಿಗಳು ಖುಲಾಸೆ
ಒಳನುಸುಳುವಿಕೆ ಹೆಚ್ಚು: ಪೂಂಚ್ ಗಡಿ ಜಿಲ್ಲೆಯಾಗಿದ್ದು, ಭಯೋತ್ಪಾದಕರ ಒಳನುಸುಳುವಿಕೆ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮತ್ತು ಭಾರತೀಯ ಸೇನೆ ಸದಾ ಹೆಚ್ಚಿನ ಭದ್ರತೆಯನ್ನು ಕೈಗೊಂಡಿರುತ್ತದೆ. ಈ ತಿಂಗಳ ಆರಂಭದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪೂಂಚ್ ಸೆಕ್ಟರ್‌ನಲ್ಲಿ ಸೇನೆಯು ಪ್ರಮುಖ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿತು.
ಏಪ್ರಿಲ್ 8 ಮತ್ತು 9ರಂದು ಮಧ್ಯರಾತ್ರಿ ಎಲ್‌ಒಸಿಯಲ್ಲಿ ಸೇನಾ ಪಡೆಗಳು ಕೆಲ ವ್ಯಕ್ತಿಗಳ ಅನುಮಾನಾಸ್ಪದ ಚಲನವಲನಗಳನ್ನು ಪತ್ತೆಹಚ್ಚಿದ್ದವು. ಶಂಕಿತ ನುಸುಳುಕೋರರು ಕಂಡುಬಂದ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಮಾಡಲಾಗಿತ್ತು. ಆಗ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಹತನಾಗಿದ್ದ. ಇತರ ಶಂಕಿತ ಅರಣ್ಯ ಪ್ರದೇಶಕ್ಕೆ ಓಡಿಹೋಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈ ಹಿಂದೆ ಮಾರ್ಚ್‌ನಲ್ಲೂ ಸಹ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ತಂಗ್‌ಧರ್ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದರು. ಈ ವೇಳೆ ಸ್ಥಳದಲ್ಲಿ 200ಕ್ಕೂ ಹೆಚ್ಚು ಎಕೆ ರೈಫಲ್ಸ್ ಬುಲೆಟ್ಗಳು, ಮೂರು ಮ್ಯಾಗಜೀನ್‌ಗಳು, ಎರಡು ಚೀನಾ ನಿರ್ಮಿತ ಗ್ರೆನೇಡ್‌ಗಳು ಮತ್ತು ಔಷಧಗಳು ಮತ್ತು ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸೇನೆ ತಿಳಿಸಿತ್ತು.
ಇದನ್ನೂ ಓದಿ:ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ವಿಡಿಯೋ