ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ದೇಶದ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರ ವೈದ್ಯರ ಸಂಘದ ಅಧ್ಯಕ್ಷ ಡಾ.ನಿಸಾರ್-ಉಲ್-ಹಸನ್ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದೆ.
ಸಂವಿಧಾನದ 311 (2) (ಸಿ) ವಿಧಿಯಡಿ ನೌಕರರನ್ನು ವಜಾಗೊಳಿಸಲಾಗಿದೆ. ಆಯಾ ಸಂದರ್ಭಗಳಲ್ಲಿ ದೇಶದ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿಚಾರ ದೇಶದ ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರಿಗೆ ಮನವರಿಕೆಯಾದಲ್ಲಿ ಅಂಥ ನೌಕರನ ವಿರುದ್ಧ ಯಾವುದೇ ತನಿಖೆ ನಡೆಸದೆ ಮತ್ತು ಆ ನೌಕರನಿಗೆ ಸ್ಪಷ್ಟೀಕರಣ ನೀಡುವ ಅವಕಾಶ ನೀಡದೆ ಅವನನ್ನು ನೌಕರಿಯಿಂದ ವಜಾಗೊಳಿಸುವ ಅಧಿಕಾರವನ್ನು ಸಂವಿಧಾನದ 311 (2) (ಸಿ) ವಿಧಿ ಸರ್ಕಾರಕ್ಕೆ ನೀಡುತ್ತದೆ.
ವಜಾಗೊಂಡ ನೌಕರರು ದೇಶದ ಭದ್ರತೆಗೆ ಮಾರಕವಾಗಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ದೇಶದ ಭದ್ರತೆಯ ಹಿತದೃಷ್ಟಿಯಿಂದ ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ಬುಧವಾರ ಹೊರಡಿಸಿದ ಸರ್ಕಾರಿ ಆದೇಶಗಳಲ್ಲಿ ತಿಳಿಸಲಾಗಿದೆ.
ಕುಪ್ವಾರಾದ ಕುನಾನ್ ಗ್ರಾಮದ ಪೊಲೀಸ್ ಕಾನ್ಸ್ಟೆಬಲ್ ಅಬ್ದುಲ್ ಮಜೀದ್ ಭಟ್, ಕುಪ್ವಾರಾದ ಶಿಕ್ಷಕ ಫಾರೂಕ್ ಅಹ್ಮದ್ ಮಿರ್, ಉನ್ನತ ಶಿಕ್ಷಣ ಇಲಾಖೆಯ ಪ್ರಯೋಗಾಲಯ ನೌಕರ ಮತ್ತು ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಿವಾಸಿ ಅಬ್ದುಲ್ ಸಲಾಮ್ ರಾಥರ್ ಇವರು ವಜಾಗೊಂಡ ಇತರ ಮೂವರು ನೌಕರರರಾಗಿದ್ದಾರೆ.