ತಿರುಚ್ಚಿ (ತಮಿಳುನಾಡು): ಐದು ದಶಕಗಳಷ್ಟು ಹಳೆಯದಾದ ಮನೆಯೊಂದರ ಮೇಲ್ಛಾವಣಿ ಕುಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಬಾಲಕಿಯರು, ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಹೊಸ ವರ್ಷದ ಮೊದಲ ದಿನವೇ ತಿರುಚ್ಚಿಯ ಅರಿಮಂಗಲಂ ಪ್ರದೇಶದಲ್ಲಿ ನಡೆದಿದೆ.
ಕೀಳ ಅಂಬಿಕಾಪುರಂ ಗಾಂಧಿ ಸ್ಟ್ರೀಟ್ನಲ್ಲಿ 1972ರಲ್ಲಿ ಈ ಮನೆಯನ್ನು ನಿರ್ಮಿಸಲಾಗಿತ್ತು. ಆಟೋ ಚಾಲಕ ಮಾರಿಮುತ್ತು ಎಂಬುವರು ಕುಟುಂಬದ ಜೊತೆ ವಾಸವಾಗಿದ್ದರು. ಘಟನೆಯ ವೇಳೆ ಮಾರಿಮುತ್ತು ತಮ್ಮ ತಂಗಿಯ ಗಂಡನ ಸಾವಿನ ನಂತರದ ಕಾರ್ಯಕ್ರಮಕ್ಕೆ ಚೆನ್ನೈಗೆ ತೆರಳಿದ್ದರು. ಅವರ ತಾಯಿ ಶಾಂತಿ (70), ಪತ್ನಿ ವಿಜಯಲಕ್ಷ್ಮಿ (38) ಹಾಗೂ ಇಬ್ಬರು ಮಕ್ಕಳಾದ ಪ್ರದೀಪಾ (12) ಮತ್ತು ಹರಿಣಿ (10) ಮನೆಯಲ್ಲಿದ್ದರು.
ಜ.1ರಂದು ಮುಂಜಾನೆ ಮನೆ ಮಂದಿ ಮಲಗಿದ್ದಾಗ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ತಡವಾಗಿ ನೆರೆಹೊರೆಯವರ ಗಮನಕ್ಕೆ ಬಂದಿದೆ. ಅಷ್ಟೊತ್ತಿಗಾಗಲೇ ಮನೆಯೊಳಗಿದ್ದ ಶಾಂತಿ, ವಿಜಯಲಕ್ಷ್ಮಿ, ಪ್ರದೀಪಾ ಹಾಗೂ ಹರಿಣಿ ಅವಶೇಷಗಳಡಿಯಲ್ಲಿ ಸಿಲುಕಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.