ಚಮೋಲಿ (ಉತ್ತರಖಂಡಾ): ಏಪ್ರಿಲ್ 22ರಿಂದ ಚಾರ್ಧಾಮ್ ಯಾತ್ರೆ ಆರಂಭವಾಗಿದ್ದು, ಇಂದು ಬದ್ರಿನಾಥ ಧಾಮದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಗ್ಗೆ 7.10ಕ್ಕೆ ಬದ್ರಿನಾಥ ದೇಗುಲದ ಬಾಗಿಲು ತೆಗೆದಿದ್ದು, ಅರ್ಚಕರು ಬದ್ರಿ ವಿಶಾಲ್ಗೆ ಪೂಜಾ ಪುನಸ್ಕಾರಗಳನ್ನು ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಇಂದು ವಿಶ್ವದ ಪ್ರಖ್ಯಾತ ದೇಗುಲವಾದ ಬದ್ರಿನಾಥದ ಮೊದಲ ಪೂಜೆ ನಡೆಸಲಾಯಿತು.
ಇನ್ನು ಈಗಾಗಲೇ ಆರಂಭವಾಗಿರುವ ಚಾರ್ಧಾಮ್ ಯಾತ್ರೆ ಹಿನ್ನಲೆ ವಿಐಪಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಇಂದು ಬದ್ರಿನಾಥ ದರ್ಶನಕ್ಕೆ ಆಗಮಿಸಿದರು. ಈ ಹಿನ್ನೆಲೆ 20 ಕ್ವಿಂಟಾಲ್ ಹೂವುಗಳಿಂದ ಬದ್ರಿನಾಥ ದೇಗುಲವನ್ನು ಅಲಂಕರಿಸಲಾಗಿತ್ತು. ಈ ಮುಂಚೆ ಏಪ್ರಿಲ್ 22ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲನ್ನು ತೆರೆಯಲಾಗಿತ್ತು. ಇನ್ನು ಏಪ್ರಿಲ್ 25ರಂದು ಕೇಥರಾನಾಥ ದೇಗುಲದಲ್ಲಿ ಭಕ್ತರ ದರ್ಶನ ಆರಂಭವಾಯಿತು. ಇಂದು ಬದ್ರಿನಾಥ ಧಾಮ ಕೂಡ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ನಾಲ್ಕು ಧಾಮಗಳ ದರ್ಶನವನ್ನು ಇದೀಗ ಯಾತ್ರಾರ್ಥಿಗಳು ಕೈಗೊಳ್ಳಬಹುದಾಗಿದೆ.
ಈ ಬಾರಿ ಸರಿ ಸುಮಾರು 95 ಸಾವಿರಕ್ಕೂ ಹೆಚ್ಚು ಭಕ್ತರು ಚಾರ್ಧಾಮ್ ಯಾತ್ರೆಗೆ ಮುಂದಾಗಿದ್ದಾರೆ. ಆರಂಭದಲ್ಲಿ ಭಕ್ತರ ಅಂಕಿ - ಸಂಖ್ಯೆಗಳನ್ನು ಗಮನಿಸಿದಾಗ ಎಲ್ಲಾ ದಾಖಲೆಗಳನ್ನು ಮೀರಿ ಈ ಬಾರಿ ಭಕ್ತರು ಯಾತ್ರೆ ನಡೆಸಿರುವುದು ವರದಿಯಾಗಿದೆ. ಕಳೆದ ವರ್ಷದ ದಾಖಲೆ ಮೀರಿ ಈ ಬಾರಿ ಭಕ್ತರು ಚಾರ್ಧಾಮ್ ಯಾತ್ರೆಯತ್ತ ಹೆಜ್ಜೆ ಹಾಕಿದ್ದಾರೆ. ಸಾಂಕ್ರಾಮಿಕತೆ ಹಿನ್ನಲೆ ಈ ಚಾರ್ಧಾಮ್ ಯಾತ್ರೆಗೆ ಕೆಲವು ವರ್ಷ ಬ್ರೇಕ್ ನೀಡಲಾಗಿತ್ತು, ಇದೀಗ ಈ ಯಾತ್ರೆ ಆರಂಭವಾಗಿದ್ದು, ಭಕ್ತರ ಸಂಖ್ಯೆ ಕೂಡ ನಿರೀಕ್ಷೆಗೂ ಮೀರಿ ಇದೆ.