ನಾಗಪುರ:ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೇ ಎರವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದ ನಾಲ್ವರು ಮಕ್ಕಳಿಗೆ ರಕ್ತ ವರ್ಗಾವಣೆ ಮಾಡುವ ವೇಳೆ ಆದ ಯಡವಟ್ಟಿನಿಂದ ಆ ಮಕ್ಕಳು ಹೆಚ್ಐವಿ ಸೋಂಕಿಗೆ ತುತ್ತಾಗಿದ್ದು, ಇದರಲ್ಲಿ ಒಬ್ಬ ಸಾವನ್ನಪ್ಪಿದ ಆಘಾತಕಾರಿ ಅಂಶ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಾಗಪುರದ ಜರಿಪಟ್ಕಾ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಥಲಸ್ಸೇಮಿಯಾ ಕಾಯಿಲೆಗೀಡಾದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ 15 ದಿನಗಳಿಗೊಮ್ಮೆ ರಕ್ತವನ್ನು ವರ್ಗಾವಣೆ ಮಾಡಲಾಗುತ್ತದೆ. ರಕ್ತ ನಿಧಿಯಿಂದ ಉಚಿತವಾಗಿ ನೀಡಲಾಗುವ ರಕ್ತವನ್ನು ಪರೀಕ್ಷೆ ಮಾಡದೇ ಮಕ್ಕಳಿಗೆ ನೀಡಲಾಗಿದೆ.