ವಿಶಾಖಪಟ್ಟಣ:ವಿಶಾಖ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಬಟ್ಟೆ ತೊಳೆಯಲು ಪೋಷಕರೊಂದಿಗೆ ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವ ಘಟನೆ ವಿ.ಮಾಡುಗುಲ ತಾಲೂಕಿನ ಜಾಲಂಪಿಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಪೋಷಕರೊಂದಿಗೆ ಬಟ್ಟೆ ತೊಳೆಯಲು ಹೋದ ಮಕ್ಕಳು.. ಮೂವರು ಸಹೋದರಿಯರು ಸೇರಿ ನಾಲ್ವರು ನೀರುಪಾಲು! - ವಿಶಾಖಪಟ್ಟಣ ಅಪರಾಧ ಸುದ್ದಿ
ಪೋಷಕರೊಂದಿಗೆ ಬಟ್ಟೆ ತೊಳೆಯಲು ಹೋದಾಗ ನಾಲ್ವರು ಮಕ್ಕಳು ನೀರುಪಾಲಾದ ಘಟನೆ ಆಂಧ್ರಪ್ರದೇಶ ವಿಶಾಖಪಟ್ಟಣದಲ್ಲಿ ನಡೆದಿದೆ.
ಬಟ್ಟೆ ತೊಳೆಯಲು ಪೋಷಕರು ಪೆದ್ದೆರು ಕೆನಾಲ್ಗೆ ತೆರಳಿದ್ದಾರೆ. ಈ ವೇಳೆ, ಪೋಷಕರೊಂದಿಗೆ ಮಕ್ಕಳು ಸಹ ತೆರಳಿದ್ದಾರೆ. ಬಳಿಕ ನೀರಿನಲ್ಲಿ ಆಟವಾಡುತ್ತಲೇ ಅವರು ಕಣ್ಮರೆಯಾಗಿದ್ದಾರೆ. ಕೂಡಲೇ ಸ್ಥಳೀಯರು ಮಕ್ಕಳನ್ನು ನೀರಿನಿಂದ ಹೊರ ತೆಗೆದರು. ಆದರೆ ಅಷ್ಟೊತ್ತಿಗಾಗಲೇ ಮಕ್ಕಳ ಪ್ರಾಣ ಹಾರಿ ಹೋಗಿತ್ತು.
ಮೃತರು ಮಹೇಂದ್ರ (7), ಪಂತ್ತಾಲ ವೆಂಕಟ ಜಾನ್ಸಿ (10), ಪಂತ್ತಾಲ ಶರ್ಮಿಲಾ (7), ಪಂತ್ತಾಲ ಜಾಹ್ನವಿ (11) ಎಂದು ಗುರುತಿಸಲಾಗಿದೆ. ಇನ್ನು ಮಹೇಂದ್ರ ಅವರ ಪೋಷಕರಿಗೆ ಒಬ್ಬನೇ ಮಗ. ಉನ್ನತ ಮಟ್ಟದ ವ್ಯಾಸಂಗ ಓದಿಸುವ ಆಸೆ ಹೊಂದಿದ್ದೇವೆ ಎಂದು ಮಹೇಂದ್ರ ತಾಯಿ ರಾಜೇಶ್ವರಿ ಕಣ್ಣೀರು ಹಾಕುತ್ತಲೇ ಹೇಳಿದರು. ಇನ್ನುಳಿದ ಮೂರು ಮಕ್ಕಳು ಒಂದೇ ಕುಟುಂಬದ ಅಣ್ತಮ್ಮಂದಿರ ಮಕ್ಕಳು ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.