ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನ್ಯುಮೋನಿಯಾದಿಂದ ನಾಲ್ವರು ಪುಟ್ಟ ಬಾಲಕಿಯರ ಸರಣಿ ಸಾವುಗಳು ಸಂಭವಿಸಿವೆ. ಫೆಬ್ರವರಿ 10ರಿಂದ 12ರ ನಡುವೆ ಮೂವರು ಬಾಲಕಿಯರು ಮೃತಪಟ್ಟಿದ್ದರೆ, ನಾಲ್ಕನೇ ಮಗು ಮಂಗಳವಾರ ಕೊನೆಯುಸಿರೆಳೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ಕಾರಿ ಮಕ್ಕಳ ಆರೈಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಅಂತಾರಾ, ಲಕ್ಷ್ಮೀ, ಆಯುಷಿ ಮತ್ತು ದೀಪಾ ಎಂದು ಗುರುತಿಸಲಾಗಿದೆ. ಚಂದ್ರು ಎಂಬ ಬಾಲಕ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಮಕ್ಕಳ ಸರಣಿ ಸಾವಿನ ಬಗ್ಗೆ ಈಗಾಗಲೇ ಚೀಫ್ ಮೆಡಿಕಲ್ ಆಫೀಸರ್ (ಸಿಎಂಒ) ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.
ಸದ್ಯ ತಜ್ಞರ ತಂಡ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಮಕ್ಕಳನ್ನು ಶೀತದಿಂದ ರಕ್ಷಿಸಲು ಆರೈಕೆ ಕೇಂದ್ರದಲ್ಲಿ ಸಾಕಷ್ಟು ಆರೋಗ್ಯ ವ್ಯವಸ್ಥೆಗಳಿಲ್ಲ ಎಂದು ಬಹಿರಂಗವಾಗಿದೆ. ಈ ಶಿಶು ಪಾಲನಾ ಕೇಂದ್ರದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳು ಇದರೇ ಇರುವ ಕಾರಣ ಮಕ್ಕಳು ಶೀತಕ್ಕೆ ತುತ್ತಾಗಬೇಕಾಗಿದೆ. ಇದಾದ ನಡೆದ ಪರೀಕ್ಷೆಯಲ್ಲಿ ಮಕ್ಕಳು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ಖಚಿತವಾಗಿದೆ ಎಂದು ಗೊತ್ತಾಗಿದೆ.
ಚಿಕಿತ್ಸೆ ಪಡೆಯುತ್ತಿರುವಾಗಲೇ ನಾಲ್ವರು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಸಿಎಂಎಸ್ ಡಾ.ಆರ್.ಪಿ.ಸಿಂಗ್, ಮಕ್ಕಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಸದ್ಯ ನಮ್ಮ ಆಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಮಗುವಿನ ಮೇಲೆ ವೈದ್ಯರ ತಂಡ ನಿರಂತರವಾಗಿ ನಿಗಾ ಇರಿಸಿದೆ. ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.