ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ಉಗ್ರರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತರ ಸ್ಮಾರಕಕ್ಕೆ ತಾವಿ ನದಿಯ ದಡದಲ್ಲಿ ಅಡಿಪಾಯ ಹಾಕಲಾಯ್ತು. ಸೇನೆಯ ಯುದ್ಧ ಸ್ಮಾರಕದ ಮಾದರಿಯಲ್ಲಿ ಬರುವ "ಹುತಾತ್ಮರ ಸ್ಮಾರಕ" ಇದಾಗಲಿದ್ದು, ಜಮ್ಮುವಿನ ಅತಿದೊಡ್ಡ ನಾಗರಿಕ ಸ್ಮಾರಕ ಎಂದು ಹೇಳಲಾಗಿದೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದಾಗಿ ಕಣಿವೆಯಿಂದ ಕಾಶ್ಮೀರಿ ಹಿಂದೂಗಳು ಬಲವಂತವಾಗಿ ವಲಸೆ ಬಂದ ನಂತರ ಅಂದರೆ, 1990 ರ ನಂತರ ಉಗ್ರರಿಂದ ಕೊಲ್ಲಲ್ಪಟ್ಟ ಕಾಶ್ಮೀರಿ ಪಂಡಿತರಿಗಾಗಿ ನಿರ್ಮಾಣವಾಗಲಿರುವ ಮೊದಲ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿದ್ದಾಗಿ ಮಾತಾ ಭದ್ರಕಾಳಿ ಟ್ರಸ್ಟ್ ಅಧ್ಯಕ್ಷ ದಿಲೀಪ್ ಪಂಡಿತ ಹೇಳಿದರು.
ಇದು ತಾವಿ ನದಿಯ ದಡದಲ್ಲಿರುವ ಥಲ್ವಾಲ್‌ನಲ್ಲಿ ಮೂರು ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ ಎಂದು ಯೋಜನಾ ಉಸ್ತುವಾರಿ ರಾಜ್ ಕುಮಾರ್ ಹೇಳಿದರು. ಗುಮ್ಮಟದ ಕೆಳಗೆ, ದೊಡ್ಡ ಅಮೃತಶಿಲೆಯ ಗೋಡೆಗಳಿದ್ದು, ಅದರ ಮೇಲೆ ಮರಣ ಹೊಂದಿದ ಪಂಡಿತ ಸಮುದಾಯದ ಸದಸ್ಯರ ಹೆಸರುಗಳು, 1947ರಲ್ಲಿನ ಮೊದಲ ಭಾರತ-ಪಾಕಿಸ್ತಾನ ಯುದ್ಧ ಹಾಗೂ 1990 ರ ನಂತರ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪಿದವರ ಹೆಸರನ್ನು ಕೆತ್ತಲಾಗುತ್ತದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.