ಹೈದರಾಬಾದ್:ಆನ್ಲೈನ್ ವಂಚನೆಗಳು ಈಗ ಎಗ್ಗಿಲ್ಲದೇ ನಡೆಯುತ್ತಿವೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಒಟಿಪಿ, ಮೊಬೈಲ್ ನಂಬರ್ ಕೇಳಿ ಅಕೌಂಟ್ನಲ್ಲಿರುವ ಹಣವನ್ನು ಲಪಟಾಯಿಸುತ್ತಾರೆ. ಇದ್ಯಾವುದನ್ನೂ ಹಂಚಿಕೊಳ್ಳದ ಕೇಂದ್ರದ ಮಾಜಿ ಸಚಿವ, ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರ ಖಾತೆಗೆ ಕನ್ನ ಹಾಕಿರುವ ಸೈಬರ್ ವಂಚಕರು 99,999 ರೂಪಾಯಿ ಹಣ ದೋಚಿದ್ದಾರೆ. ಇದರ ವಿರುದ್ಧ ಮಾರನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಅವರು ಎಕ್ಸ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ತಾಂತ್ರಿಕತೆಯನ್ನು ತಿಳಿದಿರುವ ಮತ್ತು ವಿದ್ಯಾವಂತ ಜನರು ಸಹ ಸೈಬರ್ ವಂಚನೆಗೆ ಒಳಗಾಗುತ್ತಾರೆ. ನನ್ನ ಖಾತೆಯಿಂದಲೇ ಒಂದು ಲಕ್ಷ ರೂಪಾಯಿ ಎಗರಿಸಿದ್ದಾರೆ. ಡಿಜಿಟಲ್ ಇಂಡಿಯಾದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಸೇಫ್ ಆಗಿಲ್ಲ ಎಂದು ದೂರಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?:ನನ್ನ ಪತ್ನಿ ಪ್ರಿಯಾ ಅವರಿಗೆ ಬ್ಯಾಂಕ್ ಉದ್ಯೋಗಿಯ ಸೋಗಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು, 99,999 ರೂಪಾಯಿ ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ವರ್ಗಾಯಿಸಲು ಕೋರಿದ್ದಾನೆ. ಇದನ್ನು ಪ್ರಿಯಾ ತಿರಸ್ಕರಿಸಿದ್ದಾರೆ. ಆದರೂ ಬಿಡದ ವಂಚಕ ಮೂರು ಬಾರಿ ಕರೆ ಮಾಡಿದ್ದಾನೆ. ಎಷ್ಟೇ ಕೇಳಿದರೂ, ಒಟಿಪಿ ಇತರ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಆದರೆ, ಕೆಲ ನಿಮಿಷಗಳಲ್ಲಿ ನನ್ನ ಖಾತೆಯಿಂದ ದೊಡ್ಡ ಮೊತ್ತ ಕಡಿತವಾಗಿದೆ ಎಂದಿದ್ದಾರೆ.
ದಯಾನಿಧಿ ಮಾರನ್ ಮತ್ತು ಪತ್ನಿ ಪ್ರಿಯಾ ಇಬ್ಬರೂ ಆಕ್ಸಿಸ್ ಬ್ಯಾಂಕ್‌ನ ಜಂಟಿ ಅಕೌಂಟ್ ಹೊಂದಿದ್ದಾರೆ. ಮುಖ್ಯ ಖಾತೆದಾರ ನಾನೇ ಆಗಿದ್ದೇನೆ. ಪ್ರಿಯಾ ಅವರ ಮೊಬೈಲ್ ನಂಬರ್ ಅನ್ನು ಖಾತೆಗೆ ಲಿಂಕ್ ಆಗಿಲ್ಲ. ಆದರೂ ಅವರಿಗೆ ಕರೆ ಹೋಗಿದೆ. ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ, ಹಣವನ್ನು ವರ್ಗಾಯಿಸಲು ಕೇಳಿದ ಬಳಿಕ 99,999 ವರ್ಗಾವಣೆಯಾಗಿದೆ. ಹಣ ಕಡಿತವಾದ ಸಂದೇಶ ನನ್ನ ನಂಬರ್ಗೆ ಬಂದಿದೆ. ಇದು ದೊಡ್ಡ ವಂಚನೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.