ದುರ್ಗಾಪುರ (ಪಶ್ಚಿಮ ಬಂಗಾಳ): ಭಾರತದ 'ಶಾಹೆನ್ ಶಾ', 'ಬಾದ್ ಶಾ' ಯಾರೂ ನನ್ನ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಾಬುಲ್ ಸುಪ್ರಿಯೊ ಯಾರ ಹೆಸರನ್ನೂ ಉಲ್ಲೇಖಿಸದೇ ಪರೋಕ್ಷವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಪಶ್ಚಿಮ ಬಂಗಾಳದ ದುರ್ಗಾಪುರ ಉತ್ಸವದಲ್ಲಿ ಮಾತನಾಡಿದ ಅವರು, ತಮ್ಮದೇ ಪಕ್ಷದ ನಾಯಕರನ್ನು ಟೀಕಿಸಿದರು. ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉತ್ಸವದಲ್ಲಿ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ರಾಜ್ಯ ಸಚಿವರಾಗಿರುವ ಬಾಬುಲ್ ಸುಪ್ರಿಯೊ ಅವರ 54ನೇ ಹುಟ್ಟುಹಬ್ಬದ ಸಲುವಾಗಿ ಸಂಗೀತ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು.
ಈ ವೇಳೆ ವೇದಿಕೆಯಲ್ಲಿ ನಿಂತು ಬಾಬುಲ್ ಸುಪ್ರಿಯೊ ಹಾಡಿದರು. ಬಳಿಕ ಮಾತನಾಡಿ, "ಗಾಯನದಲ್ಲೇ ಮುಂದುವರೆಯುವಂತೆ ಪದೇ ಪದೇ ನನ್ನಲ್ಲಿ ಆಸೆ ಹುಟ್ಟುತ್ತದೆ. ಸಂಗೀತ ನನ್ನ ಅರ್ಧಾಂಗಿ. ಈಗಾಗಲೇ ಈ ವಿಚಾರವನ್ನು ನಾನು ನನ್ನ ಹೆಂಡತಿಗೂ ಹೇಳಿದ್ದೇನೆ. ಹಾಗಾಗಿ ನಾನು ಈ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ನಾನು ನನ್ನ ಜೀವನದ ಚಕ್ರವರ್ತಿ. ಹೀಗಿರುವಾಗ ದೇಶದ ಚಕ್ರವರ್ತಿ ಅಥವಾ ರಾಜ ನನ್ನ ಜೀವನವನ್ನು ಬದಲಿಸಲು ಸಾಧ್ಯವಿಲ್ಲ. ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳು. ಅವರು ನನಗೆ ಸಂಗೀತದಲ್ಲಿ ಮುಂದುವರೆಯುವಂತೆ ಪ್ರೇರೇಪಿಸಿದರು" ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಪಕ್ಷದಲ್ಲಿ ತಮ್ಮ ಸಂಗೀತದ ಆಸಕ್ತಿಗೆ ಬೆಂಬಲ ಸಿಗುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.