ಕರ್ನಾಟಕ

karnataka

ETV Bharat / bharat

ಶಿಕ್ಷಕರ ದಿನದಂದೇ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಮೊಮ್ಮಗ ನಿಧನ - ಕೇಶವ ದೇಸಿರಾಜು

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ ಹಾಗೂ ಕೇಂದ್ರ ಆರೋಗ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಕೇಶವ ದೇಸಿರಾಜು ಅವರು ಶಿಕ್ಷಕರ ದಿನದಂದೇ ಇಹಲೋಕ ತ್ಯಜಿಸಿದ್ದಾರೆ.

ಕೇಶವ ದೇಸಿರಾಜು
ಕೇಶವ ದೇಸಿರಾಜು

By

Published : Sep 5, 2021, 8:38 PM IST

ಜೈಪುರ (ರಾಜಸ್ಥಾನ): ಇಂದು ಶಿಕ್ಷಕರ ದಿನಾಚರಣೆ. ಮಾಜಿ ರಾಷ್ಟ್ರಪತಿ, ವಿದ್ವಾಂಸ, ತತ್ವಜ್ಞಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು (ಸೆಪ್ಟೆಂಬರ್ 5) ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಇಂದೇ ರಾಧಾಕೃಷ್ಣನ್ ಅವರ ಮೊಮ್ಮಗ ಹಾಗೂ ಕೇಂದ್ರ ಆರೋಗ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಕೇಶವ ದೇಸಿರಾಜು ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕೇಶವ ದೇಸಿರಾಜು (66) ಅವರು ಇಂದು ಬೆಳಗ್ಗೆ ಚೆನ್ನೈನ ಅಲ್ವಾರಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಾಜಸ್ಥಾನ ಸರ್ಕಾರದ ಆರ್ಥಿಕ ಪರಿವರ್ತನಾ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದ ಕೇಶವ ದೇಸಿರಾಜು ಅವರ ಸಾವಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರೊಬ್ಬ ವಿಶಿಷ್ಟ, ಸೌಮ್ಯ ಮತ್ತು ಸೃಜನಶೀಲ ಚಿಂತಕರಾಗಿದ್ದರು ಮತ್ತು ಮಹೋನ್ನತ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲ, ಒಬ್ಬ ಮಹಾನ್ ಶಿಕ್ಷಣ ತಜ್ಞ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರ ಮೊಮ್ಮಗನಾಗಿದ್ದರು. ಆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಗೆಹ್ಲೋಟ್ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಶಿಕ್ಷಕರ ದಿನಾಚರಣೆಯಂದೇ ಕುಷ್ಟಗಿ ತಾಲೂಕಿನ ಇಬ್ಬರು ಶಿಕ್ಷಕರ ನಿಧನ

ಐಎಎಸ್ ಅಧಿಕಾರಿಯಾಗಿದ್ದ ದೇಸಿರಾಜು ಅವರು 2016 ರಲ್ಲಿ ಹುದ್ದೆಯಿಂದ ನಿವೃತ್ತರಾಗಿದ್ದರು. ಇವರು ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ ಸರ್ಕಾರಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆಯಾದ 'ದಿ ಲೈಫ್ ಅಂಡ್ ಆರ್ಟ್ ಆಫ್ ಎಂ.ಎಸ್. ಸುಬ್ಬುಲಕ್ಷ್ಮಿ' ಪುಸ್ತಕವನ್ನು ಕೇಶವ ದೇಸಿರಾಜು ಬರೆದಿದ್ದಾರೆ.

ABOUT THE AUTHOR

...view details