ಚೆನ್ನೈ(ತಮಿಳುನಾಡು):ತಮಿಳುನಾಡಿನ ಮರ್ಕೆಂಟೈಲ್ ಬ್ಯಾಂಕ್ ಲಿಮಿಟೆಡ್ನ ಮಾಜಿ ಅಧ್ಯಕ್ಷ ನೇಸಮಣಿಮಾರನ್ ಮುತ್ತು ಅವರಿಗೆ ಸೇರಿದ 293.91 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಜಾರಿ ನಿರ್ದೇಶನಾಲಯದ ವಕ್ತಾರರು, ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ 1999ರ ಅಡಿ ಆಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಶಕ್ಕೆ ಪಡೆದಿರುವ ಆಸ್ತಿಯಲ್ಲಿ ಭಾರತೀಯ ಕಂಪನಿಯ ಷೇರುಗಳು ಪ್ರಮುಖವಾಗಿದ್ದು, ಇದರಲ್ಲಿ ಸದರ್ನ್ ಅಗ್ರಿಫ್ಯೂರೇನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಆನಂದ್ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್, ಎಂಜಿಎಂ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಎಂಜಿಎಂ ಡೈಮಂಡ್ ಬೀಚ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಷೇರುಗಳಿವೆ ಎಂದು ತಿಳಿದುಬಂದಿದೆ.
2005-06 ಮತ್ತು 2006-07ರಲ್ಲಿ ನೇಸಮಣಿಮಾರನ್ ಸಿಂಗಪುರದಲ್ಲಿ ಎರಡು ಕಂಪನಿ ಹುಟ್ಟುಹಾಕಿದ್ದು, ಅದರಲ್ಲಿ 293.91 ಕೋಟಿ ರೂ. ಅಂದರೆ(5,29,86,250 ಸಿಂಗಪುರ ಡಾಲರ್) ಹೂಡಿಕೆ ಮಾಡಿದ್ದಾರೆ. ಇದಕ್ಕಾಗಿ ಅವರು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅನುಮೋದನೆ ಪಡೆದುಕೊಂಡಿಲ್ಲ ಎಂದು ಜಾರಿ ನಿರ್ದೇಶನಾಲಯದ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿರಿ:ಬಿಹಾರದಲ್ಲಿ ಸಿಲಿಂಡರ್ ಸ್ಫೋಟ.. ಐವರು ಮಕ್ಕಳು ಸಜೀವದಹನ
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಸೆಕ್ಷನ್ 37A(1)ರ ಅಡಿ ಭಾರತದಲ್ಲಿ ವಾಸ ಮಾಡಿರುವ ವ್ಯಕ್ತಿ ಆರ್ಬಿಐನಿಂದ ಅನುಮೋದನೆ ಪಡೆದುಕೊಳ್ಳದೇ ವಿದೇಶದಲ್ಲಿ ಹೂಡಿಕೆ ಮಾಡುವ ವ್ಯಕ್ತಿಯ ಆಸ್ತಿ ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ. ಇವರು ವಿದೇಶದಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೌಲ್ಯ 293.91 ಕೋಟಿ ರೂ. ಆಗಿದ್ದು, ಎಲ್ಲವನ್ನೂ ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.