ಸವಾಯಿ ಮಾಧೋಪುರ (ರಾಜಸ್ಥಾನ) :ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬುಧವಾರ ಬೆಳಗ್ಗೆ ಪ್ರಸ್ತುತ ರಾಜಸ್ಥಾನದ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು. ಮಾಜಿ ಆರ್‌ಬಿಐ ಗವರ್ನರ್ ರಾಜನ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್ ಅವರೊಂದಿಗೆ ಹೆಜ್ಜೆ ಹಾಕಿದರು.
ಮಾಜಿ ಆರ್‌ಬಿಐ ಮುಖ್ಯಸ್ಥ ರಾಜನ್ ನೋಟು ಅಮಾನ್ಯೀಕರಣದ ತೀವ್ರ ಟೀಕಾಕಾರರಾಗಿದ್ದಾರೆ. ಈ ಹಿಂದೆ ಭಾರತದ ಆರ್ಥಿಕ ಬೆಳವಣಿಗೆ ಮತ್ತು ವಿತ್ತೀಯ ಕೊರತೆಯ ಬಗ್ಗೆ ಆಗಾಗ ಕಳವಳ ವ್ಯಕ್ತಪಡಿಸಿದ್ದಾರೆ. ರಾಜನ್ ತಮ್ಮ ಪುಸ್ತಕ ವಾಟ್ ಡು ವಾಟ್ ಐ ಡು (I do what I do) ನಲ್ಲಿ ತಾವು ನೋಟು ಅಮಾನ್ಯೀಕರಣದ ಪರವಾಗಿಲ್ಲ ಎಂದು ಬಹಿರಂಗಪಡಿಸಿದ್ದರು. ಇಂಥ ಕ್ರಮಗಳಿಂದ ಅಲ್ಪಾವಧಿಯಲ್ಲಿ ಆಗುವ ಲಾಭಕ್ಕಿಂತ ದೀರ್ಘಾವಧಿಯಲ್ಲಿ ಆಗುವ ನಷ್ಟವೇ ಹೆಚ್ಚು ಎಂದು ಅವರು ಪ್ರತಿಪಾದಿಸಿದ್ದರು.
ಇಂದು ಬೆಳಗ್ಗೆ ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿಯಿಂದ ಭಾರತ್ ಜೋಡೊ ಯಾತ್ರೆ ಪುನಾರಂಭವಾಗಿದೆ. ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದೆ. ಇದು ಫೆಬ್ರವರಿ 2023 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.