ಚಂಡಿಗಢ (ಪಂಜಾಬ್):ಪಂಜಾಬ್‌ನಲ್ಲಿ ಮಹತ್ತರ ರಾಜಕೀಯ ಬೆಳವಣಿಗೆ ನಡೆಯುವ ನಿರೀಕ್ಷೆ ಹುಟ್ಟಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮದೇ ಪಕ್ಷವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ.
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಇಂದು ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಘೋಷಿಸಿದರು. ರೈತರ ಪ್ರತಿಭಟನೆ ವಿಚಾರ ಬಗೆಹರಿದರೆ, ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಒಡೆದು ಹೋಗಿರುವ ಅಕಾಲಿ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ.
ಕಳೆದ ತಿಂಗಳು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ವೇಳೆ ಸಿಂಗ್ ರೈತರ ಪ್ರತಿಭಟನೆಯ ಬಗ್ಗೆ ಚರ್ಚಿಸಿದರು. ಇಂದು ಸಂಜೆ ಸರಣಿ ಟ್ವೀಟ್‌ಗಳಲ್ಲಿ, ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್, ಸಿಂಗ್ ಅವರ ಯೋಜನೆ ಕುರಿತು ಟ್ವೀಟ್ ಮೂಲಕ ಮಾಹಿತಿ ಹೊರ ಹಾಕಿದ್ದಾರೆ.
"ಪಂಜಾಬಿನ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಇಲ್ಲಿನ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಶೀಘ್ರದಲ್ಲೇ ಘೋಷಿಸುತ್ತೇನೆ" ಎಂದು ಅಮರೀಂದರ್ ಸಿಂಗ್ ಹೇಳಿರುವುದಾಗಿ ರವೀಣ್ ಟ್ವೀಟ್ ಮಾಡಿದ್ದಾರೆ.
"2022 ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆಗೆ ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ ವಿಚಾರ ಇತ್ಯರ್ಥವಾದರೆ ಬಿಜೆಪಿ ಹಾಗೂ ಒಡೆದು ಹೋಗಿರುವ ಅಕಾಲಿ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಳ್ಳುವೆವು" ಎಂದು ತಿಳಿಸಿದ್ದಾರೆ.
"ನನ್ನ ಜನರು ಮತ್ತು ನನ್ನ ರಾಜ್ಯದ ಭವಿಷ್ಯವನ್ನು ಭದ್ರಪಡಿಸುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ಪಂಜಾಬ್‌ಗೆ ರಾಜಕೀಯ ಸ್ಥಿರತೆ ಮತ್ತು ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ರಕ್ಷಣೆ ಬೇಕು. ಇಂದು ಅಪಾಯದಲ್ಲಿರುವ ಅದರ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ ಎಂದು ನಾನು ನನ್ನ ಜನರಿಗೆ ಭರವಸೆ ನೀಡುತ್ತೇನೆ" ಎಂದು ಅಮರೀಂದರ್ ಸಿಂಗ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
79 ವರ್ಷ ಅಮರೀಂದರ್ ಸಿಂಗ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದರು. ಪಂಜಾಬ್‌ನಲ್ಲಿ ಅತಿದೊಡ್ಡ ಸಮೂಹ ನಾಯಕರಾಗಿದ್ದರು.