ಚಂಡೀಗಢ: ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಾವು ಹೊಸದಾಗಿ ರಚಿಸಿದ್ದ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಪಕ್ಷವನ್ನು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ವಿಲೀನಗೊಳಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 19 ರಂದು ವಿಲೀನ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಅವರು ಇತ್ತೀಚೆಗೆ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಲೀನದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.
ಕೆಲವು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಪಕ್ಷ ವಿಲೀನಕ್ಕೆ ಇದೇ ಸಂದರ್ಭದಲ್ಲಿ ಒಪ್ಪಿಗೆ ಸಿಕ್ಕಿದೆ ಎಂಬ ಊಹಾಪೋಹ ರಾಜಕೀಯ ವಲಯಗಳಲ್ಲಿ ಹಬ್ಬಿತ್ತು. ಈ ಬೆಳವಣಿಗೆಯು 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪಂಜಾಬ್ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಬಹುದು.