ಪುಣೆ (ಮಹಾರಾಷ್ಟ್ರ): ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಮತ್ತು ಮಹಾರಾಷ್ಟ್ರ ಪುಣೆಯ ಅಮರಾವತಿ ನಗರದ ಮೊದಲ ಮೇಯರ್ ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅವರ ಆರೋಗ್ಯ ಹದೆಗೆಟ್ಟಿದ್ದು, ಇಂದು ಪುಣೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾದ ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರು 1985 ರಿಂದ 1990 ರವರೆಗೆ ಅಮರಾವತಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದರು. 1990ರ ಚುನಾವಣೆಯಲ್ಲಿ ಸೋತ ಅವರು 1991 ರಲ್ಲಿ ಮೊದಲ ಬಾರಿಗೆ ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆದ್ದು ಅಮರಾವತಿಯ ಮೊದಲ ಮೇಯರ್ ಆದರು.
ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಮೇಯರ್: ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರಿಗೆ 1972 ರಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದರು. ಆರಂಭದಲ್ಲಿ ಅವರು ನೇರಪಿಂಗಲದ ಶ್ರೀ ಶಿವಾಜಿ ಶಿಕ್ಷಣ ಸಂಸ್ಥಾನದ ಶಾಲೆಯಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಬಳಿಕ 1969 ರಲ್ಲಿ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು.
ಇದನ್ನೂ ಓದಿ:ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆ, ತಕ್ಷಣ ರಷ್ಯಾ ಸೇನೆ ವಾಪಸ್ ಪಡೆಯುವಂತೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ
ನಂತರದಲ್ಲಿ ಅಮರಾವತಿ ನಗರದ ಮುರ್ಬಾಗ್ ಪ್ರದೇಶದಲ್ಲಿ ಮೊದಲ ಶಾಲೆಯನ್ನು ಪ್ರಾರಂಭಿಸಿದರು. ಸಂಸ್ಥೆ ಸ್ಥಾಪನೆಯಾದ ಎರಡನೇ ವರ್ಷದಲ್ಲಿ ಶಿವನಗಾಂವ್ನಲ್ಲೂ ಶಾಲೆ ತೆರೆಯಲಾಯಿತು. ಬಳಿಕ 1971 ರಲ್ಲಿ ಅಮರಾವತಿ ನಗರದ ಕ್ಯಾಂಪ್ ಪ್ರದೇಶದಲ್ಲಿ ವಿದ್ಯಾಭಾರತಿ ಕಾಲೇಜು ಆರಂಭಿಸಿದರು. ಪ್ರಸ್ತುತ ದಿನಗಳಲ್ಲಿ ಈ ಕಾಲೇಜಿನಲ್ಲಿ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.
ಪ್ರತಿಭಾ ಪಾಟೀಲ್ ಜೊತೆ ವಿವಾಹ:ಜುಲೈ 7, 1965 ರಂದು ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರು ಪ್ರತಿಭಾ ಪಾಟೀಲ್ ಜೊತೆ ವಿವಾಹವಾದರು. ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಅವರ ಪುತ್ರ ರಾವ್ಸಾಹೇಬ್ ಶೇಖಾವತ್ ಅವರು 2009 ಮತ್ತು 2014 ರ ನಡುವೆ ಅಮರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.
ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧ್ಯಕ್ಷೀಯ ಅವಧಿಯು 2012 ರ ಜುಲೈ 15 ರಂದು ಕೊನೆಗೊಂಡ ಬಳಿಕ ದೇವಿಸಿಂಗ್ ರಾಂಸಿಂಗ್ ಶೇಖಾವತ್ ಮತ್ತು ಪ್ರತಿಭಾ ಪಾಟೀಲ್ ಕುಟುಂಬವು ಪುಣೆಯಲ್ಲಿ ನೆಲೆಸಿತು. ಕಳೆದ ನಾಲ್ಕು ವರ್ಷಗಳಿಂದ ದೇವಿಸಿಂಗ್ ರಾಂಸಿಂಗ್ ಶೇಖಾವತ್ ಅವರ ಆರೋಗ್ಯ ಹದೆಗೆಟ್ಟಿದ್ದು, ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಸಂಬಂಧಿಕರು ಮತ್ತು ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪುಣೆಗೆ ತೆರಳಿದ್ದಾರೆ. ಇಂದು ಸಂಜೆ ಆರು ಗಂಟೆಗೆ ಪುಣೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:ಪೂಲ್ ಪಂದ್ಯದಲ್ಲಿ ಸೋತಿದ್ದಕ್ಕೆ ನಕ್ಕ ಜನ.. ಮಾಲೀಕ, ಮಗು ಸೇರಿದಂತೆ 7 ಜನರನ್ನು ಗುಂಡಿಟ್ಟು ಕೊಂದ ಬಂದೂಕುಧಾರಿಗಳು!