ನವದೆಹಲಿ:ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಇಂದು ಭೇಟಿ ಮಾಡಿ ಸಮಾಲೋಚನೆ ಮಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ, ಕೆಲಹೊತ್ತು ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸಂಬಂಧ ಹಾಗೂ ಸೀಟು ಹಂಚಿಕೆ ಸೇರಿದಂತೆ ವಿವಿಧ ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಕೂಡ ಜೊತೆಗಿದ್ದರು.
ಪ್ರಧಾನಿ ಮೋದಿ ಭೇಟಿಯಾದ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೋದಿ- ಹೆಚ್.ಡಿ. ಕುಮಾರಸ್ವಾಮಿ:ಹೊಸ ಸಂಸತ್ ಭವನದ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಗಳು, ಕರ್ನಾಟಕದ ರೈತಾಪಿ ಜನರ ಸಮಸ್ಯೆಗಳ ಕುರಿತು ಪ್ರಧಾನಿಗಳ ಗಮನಕ್ಕೆ ತರಲಾಯಿತು. ಜೊತೆಗೆ, ಕೊಬ್ಬರಿ ಖರೀದಿಯ ಬಗ್ಗೆ ಅವರಿಗೆ ಅಹವಾಲು ಸಲ್ಲಿಸಲಾಯಿತು. ನಮ್ಮ ಮನವಿಗೆ ಪ್ರಧಾನಿಗಳು ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮೈತ್ರಿಗೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಬಿಜೆಪಿ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸುವರು. ಎರಡು ದಿನಗಳ ಕಾಲ ದೆಹಲಿಯಲ್ಲೇ ವಾಸ್ತವ್ಯ ಹೂಡುವ ಕುಮಾರಸ್ವಾಮಿ, ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡೇ ಅವರು ಬೆಂಗಳೂರಿಗೆ ವಾಪಸ್ ಬರಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ, ಅಧಿಕೃತ ಪ್ರತಿಪಕ್ಷ ಬಿಜೆಪಿಗೆ ಹಲವು ಸಂದರ್ಭಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಾಥ್ ಕೊಟ್ಟಿದ್ದರು. ಸರ್ಕಾರದ ವಿರುದ್ಧ ನಡೆದ ಎಲ್ಲ ಪ್ರತಿಭಟನೆಗೆ ಬಿಜೆಪಿಯೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೈಜೋಡಿಸಿ ಬೆಂಬಲ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳು ಮೈತ್ರಿಯ ಮುನ್ಸೂಚನೆಯಾಗಿದ್ದವು. ಅದಕ್ಕೆ ಸ್ಪಷ್ಟ ರೂಪವೆಂಬಂತೆ ಈ ಹಿಂದೆ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಮೈತ್ರಿಗೆ ಒಪ್ಪಿಗೆ ಕೊಟ್ಟು ಬಂದಿದ್ದರು.
ಇದನ್ನೂ ಓದಿ:ಆರೋಗ್ಯ ಸುಧಾರಣೆಯಾದರೆ ಪ್ರಧಾನಿ ಭೇಟಿ ಮಾಡ್ತೇನಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ