ಸದೈವ್ ಅಟಲ್ ಸ್ಮಾರಕಕ್ಕೆ ಬಿಜೆಪಿ ಗಣ್ಯರಿಂದ ಪುಷ್ಪ ನಮನ ನವದೆಹಲಿ: ದೇಶದ ಮಾಜಿ ಪ್ರಧಾನಿ, ಅಪರೂಪದ ರಾಜಕೀಯ ಮುತ್ಸದ್ಧಿ, ಶ್ರೇಷ್ಠ ಸಂಸದೀಯ ಪಟು, ಪ್ರಚಂಡ ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ ಎಂದೇ ಖ್ಯಾತಿ ಪಡೆದಿರುವ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗು ಪ್ರಧಾನಿ ನರೇಂದ್ರ ಮೋದಿ 'ಸದೈವ್ ಅಟಲ್' ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜೆ ಪಿ ನಡ್ಡಾ ಅವರೂ ಕೂಡಾ ಸ್ಮಾರಕಕ್ಕೆ ಆಗಮಿಸಿ ವಾಜಪೇಯಿ ಅವರಿಗೆ ನಮಿಸಿದರು.
ಸದೈವ್ ಅಟಲ್ ಸ್ಮಾರಕಕ್ಕೆ ತೆರಳುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಅಟಲ್ ಜಿ ಭಾರತಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಅವರ ನಾಯಕತ್ವ ಮತ್ತು ದೃಷ್ಟಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ವಾಜಪೇಯಿ ಆಶಯದಂತೆ ಮನೆ ಬಾಗಿಲಿಗೆ ಸರ್ಕಾರಿ ಸೇವೆ : ಸಚಿವ ಅಶ್ವತ್ಥ್ ನಾರಾಯಣ
ಮಾಜಿ ಪ್ರಧಾನಿಯನ್ನು ಸ್ಮರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಅಟಲ್ ಜಿ ತಮ್ಮ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟವರು. ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಯುಗಕ್ಕೆ ಅಡಿಪಾಯ ಹಾಕುವ ಮೂಲಕ ಅವರು ತಮ್ಮ ನಾಯಕತ್ವದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದರು. ಜನರಲ್ಲಿ ರಾಷ್ಟ್ರೀಯತೆಯ ಕುರಿತು ಅದ್ಭುತ ಭಾವನೆಯನ್ನು ತುಂಬಿದವರು' ಎಂದು ಸ್ಮರಿಸಿದ್ದಾರೆ.
ಇದನ್ನೂ ಓದಿ:ಅಟಲ್ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ.. 14 ದಿನಕ್ಕೆ 6,500 ಕಿ.ಮೀ ಬೈಕ್ ರೈಡ್ ಮಾಡಿದ 65ರ ವೃದ್ಧ
ವಾಜಪೇಯಿ ಬಗ್ಗೆ ಒಂದಿಷ್ಟು ಮಾಹಿತಿ..: ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ತಂದೆ ಕೃಷ್ಣ ಬಿಹಾರಿ ಅವರು ಕವಿ ಮತ್ತು ಶಾಲೆಯ ಉಪಾಧ್ಯಾಯರಾಗಿದ್ದರು. ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ್ದ ಇವರು, ಕಾನ್ಪುರದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಇದನ್ನೂ ಓದಿ:ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಕಾಮಗಾರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ
10ನೇ ಪ್ರಧಾನಿಯಾಗಿ ವಾಜಪೇಯಿ: ರಾಜಕೀಯ ವಾಜಪೇಯಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ಆದಾಗ್ಯೂ, ಅವರ ವ್ಯಕ್ತಿತ್ವ, ಕಾವ್ಯ ಮತ್ತು ರಾಜಕೀಯ ನಿಲುವು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ನಾಯಕತ್ವದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಗೆ ಸರ್ಕಾರ ರಚಿಸುವಂತೆ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನ ನೀಡಿದ್ದರು. ಈ ಮೂಲಕ ವಾಜಪೇಯಿ ದೇಶದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಇತಿಹಾಸ.
1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿಜೆಪಿಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನಮನಸ್ಕ ಪಕ್ಷಗಳ ಜತೆಗೂಡಿ ಎನ್‌ಡಿಎ ಮೈತ್ರಿಕೂಟ ರಚಿಸಲಾಯಿತು. ಮೈತ್ರಿಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ ಮತ್ತೆ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು.