ಚೆನ್ನೈ (ತಮಿಳುನಾಡು): ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪುತ್ತಿರುವ ವರದಿಗಳು ಇತ್ತೀಚೆಗೆ ಅಲ್ಲಲ್ಲಿ ಕೇಳಿ ಬರುತ್ತಿವೆ. ದೇಹದ ಬಗ್ಗೆ ಹೆಚ್ಚು ಕಾಳಜಿವಹಿಸಿ ಜಿಮ್‌ನಲ್ಲಿ ಕಸರತ್ತು ಮಾಡಿ ಫಿಟ್ ಆಗಿದ್ದವರೂ ಕೂಡಾ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. 2021ರಲ್ಲಿ ಮಿಸ್ಟರ್ ತಮಿಳುನಾಡು ಪ್ರಶಸ್ತಿ ಗೆದ್ದ ಯೋಗೇಶ್ (41) ಎಂಬವರು ಶನಿವಾರ ಜಿಮ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೋವಿಡ್ ನಂತರ ಇಂತಹ ಘಟನೆ ಹೆಚ್ಚಾಗಿ ವರದಿಯಾಗುತ್ತಿವೆ. ಕೆಲ ಸಂಶೋಧನೆಗಳು ಇದಕ್ಕೆ ಪೂರಕವಾಗಿದ್ದರೆ, ಕೆಲವು ಕೋವಿಡ್ನಿಂದ ಈ ರೀತಿ ಘಟನೆಗಳು ಸಂಭವಿಸುತ್ತಿಲ್ಲ ಎಂದು ತಜ್ಞರು ಹೇಳಿರುವ ವರದಿಗಳಿವೆ. ಆದರೆ ಫಿಟ್ನೆಸ್ಗೆ ಹೆಚ್ಚು ಆದ್ಯತೆ ಕೊಟ್ಟು ಕೊಬ್ಬಿನ ಅಂಶದಿಂದ ದೂರ ಇದ್ದವರು ಈ ರೀತಿ ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗುತ್ತಿದೆ.
ಯೋಗೇಶ್ ಅವರು ಚೆನ್ನೈನ ಮಹಾತ್ಮ ಗಾಂಧಿ ಸ್ಟ್ರೀಟ್ ಜ್ಞಾನಮೂರ್ತಿ ನಗರದ ಅಂಬತ್ತೂರು ಮೆನಂಪೇಡು ನಿವಾಸಿ. ದೇಹದಾರ್ಢ್ಯ ಪಟುವಾಗಿದ್ದು, ಹಲವು ವರ್ಷಗಳಿಂದ ವಿವಿಧ ಚಾಂಪಿಯನ್ ಶಿಪ್ಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದಿದ್ದಾರೆ. 2021ರಲ್ಲೇ 9ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಿದ್ದರು. 2021ರಲ್ಲಿ ಅವರ ದೇಹದಾರ್ಢ್ಯತೆಗೆ 'ಮಿಸ್ಟರ್ ತಮಿಳುನಾಡು' ಪ್ರಶಸ್ತಿ ಸಿಕ್ಕಿತ್ತು.