ಹೈದರಾಬಾದ್: ಆಂಧ್ರಪ್ರದೇಶದಮಾಜಿ ಸಚಿವ ವೈ.ಎಸ್.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕಡಪ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಅವರನ್ನು ಸಿಬಿಐ 8ನೇ ಆರೋಪಿಯನ್ನಾಗಿ ಮಾಡಿದೆ. ಈಗಾಗಲೇ ಬಂಧಿತರಾಗಿರುವ ವೈ ಎಸ್ ಭಾಸ್ಕರ್ ರೆಡ್ಡಿ ಅವರನ್ನು 7ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಮೌಖಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಗಳ ಪ್ರಕಾರ ಗಂಗಿರೆಡ್ಡಿ, ಸುನೀಲ್ ಯಾದವ್, ಉಮಾಶಂಕರ್ ರೆಡ್ಡಿ, ಮತ್ತು ದಸ್ತಗಿರಿ ಎಂಬುವರು ಕೊಲೆ ಯೋಜನೆ ರೂಪಿಸಿ ಸಾಕ್ಷ್ಯ ನಾಶಪಡಿಸಿ ವಿವೇಕಾನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿ ಭಾಸ್ಕರ್ ರೆಡ್ಡಿ ನಂಬಿಸಿದ್ದರು. ಅವಿನಾಶ್ ರೆಡ್ಡಿ, ಆರೋಪಿಗಳಾದ ಶಿವಶಂಕರರೆಡ್ಡಿ ಮತ್ತು ಉದಯಕುಮಾರ್ ರೆಡ್ಡಿ ಸೇರಿ ಈ ಸಂಚು ರೂಪಿಸಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ವಿವೇಕಾನಂದ ಹತ್ಯೆಯ ಹಿಂದೆ ಭಾಸ್ಕರ್ ರೆಡ್ಡಿ ಮತ್ತು ಅವರ ಪುತ್ರ ಅವಿನಾಶ್ ರೆಡ್ಡಿ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಹೇಳಿದೆ. ವಿವೇಕಾನಂದ ಅವರ ಸಾವಿನ ಸುದ್ದಿಯನ್ನು ಅವರ ಆಪ್ತ ಸಹಾಯಕ ಎಂವಿ ಕೃಷ್ಣಾ ರೆಡ್ಡಿ ಅವರು ಬೆಳಗ್ಗೆ 6.15 ಕ್ಕೆ ಬಹಿರಂಗಪಡಿಸುವ ಮೊದಲೇ ಪ್ರಸ್ತುತ ಎಪಿ ಮುಖ್ಯಮಂತ್ರಿ ವೈ.ಎಸ್ ಜಗನ್ಮೋಹನ್ ರೆಡ್ಡಿ ಅವರಿಗೆ ತಿಳಿದಿತ್ತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.
ಜಾಮೀನು ನೀಡಿದರೆ ತನಿಖೆಗೆ ಅಡ್ಡಿ:ಭಾಸ್ಕರ್ ರೆಡ್ಡಿ ಸಹ ಆರೋಪಿಗಳ ಜತೆ ಸೇರಿ ಪಿತೂರಿ ಮತ್ತು ಸಾಕ್ಷ್ಯ ನಾಶದಲ್ಲಿ ಪಾಲ್ಗೊಂಡಿರುವುದು ಬಯಲಾಗಿದೆ. ಕಡಪ ಜಿಲ್ಲೆಯಲ್ಲಿ ಅದರಲ್ಲೂ ಪುಲಿವೆಂದುಲದಲ್ಲಿ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಲ್ಲರು ಎನ್ನಲಾಗಿದೆ. ಸಾಕ್ಷಿಗಳನ್ನು ಬೆದರಿಸುವ ಹಾಗೂ ಇತರ ಆರೋಪಿಗಳ ಜತೆ ಸೇರಿ ತನಿಖೆಯ ಹಾದಿ ತಪ್ಪಿಸುವ ಯತ್ನದ ಹಲವು ನಿದರ್ಶನಗಳು ಬಹಿರಂಗವಾಗಿವೆ. ಅವರ ಬಂಧನದ ಸಂದರ್ಭದಲ್ಲಿ ಕಡಪ ಭಾಗದಲ್ಲಿ ನಡೆದ ಪ್ರತಿಭಟನೆಗಳು ಅವರ ಖ್ಯಾತಿಯನ್ನು ಹೇಳುತ್ತವೆ. ಅವರ ಉಪಸ್ಥಿತಿಯು ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಈ ಹಂತದಲ್ಲಿ ಜಾಮೀನು ನೀಡಿದರೆ, ತನಿಖೆಗೆ ತೀವ್ರ ಅಡ್ಡಿಯಾಗಲಿದೆ ಎಂದು ಸಿಬಿಐ ಆತಂಕ ವ್ಯಕ್ತಪಡಿಸಿದೆ.