ಮುಂಬೈ (ಮಹಾರಾಷ್ಟ್ರ): ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಎನ್‌ಸಿಪಿ ನಾಯಕ ಅನಿಲ್ ದೇಶಮುಖ್ ಅವರು ಜೈಲಿನಿಂದ ರಿಲೀಸ್ ಆಗಿದ್ದಾರೆ. ಇವರು ಕಳೆದ 13 ತಿಂಗಳಿಂದ ಸೆರೆಮನೆವಾಸ ಅನುಭವಿಸುತ್ತಿದ್ದರು. ಇದೀಗ ಮುಂಬೈನ ಅರ್ಥರ್ ರೋಡ್ ಜೈಲಿನಿಂದ ಹೊರಬಂದಿದ್ದಾರೆ.
ಡಿಸೆಂಬರ್ 12ರಂದು ಅನಿಲ್ ದೇಶಮುಖ್ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶಕ್ಕೆ 10 ದಿನಗಳ ಕಾಲ ತಡೆ ಕೋರಿದ ಸಿಬಿಐ, ಸುಪ್ರೀಂ ಕೋರ್ಟ್ಗೆ ಹೋಗಲು ಅವಕಾಶ ನೀಡುವಂತೆ ಮನವಿ ಮಾಡಿತ್ತು. ಅಂತೆಯೇ, ಬಿಡುಗಡೆಗೆ ಈ ಹಿಂದೆ ನ್ಯಾಯಾಲಯ ತಡೆ ನೀಡಿದೆ. ಆದರೆ, ಈ ಅವಧಿ ಮುಕ್ತಾಯವಾಗಿದ್ದು, ಮಂಗಳವಾರ ಕೋರ್ಟ್ ದೇಶಮುಖ್ ಅವರನ್ನು ಬಿಡುಗಡೆಗೊಳಿಸಿತು.
ಪೊಲೀಸ್ ಅಧಿಕಾರಿಗಳ ವಿರುದ್ಧ ದೇಶಮುಖ್ ವಾಗ್ದಾಳಿ:ಜೈಲಿನಿಂದ ಹೊರಬರುತ್ತಿದ್ದಂತೆ ಅನಿಲ್ ದೇಶಮುಖ್, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಂಬೀರ್ ಸಿಂಗ್ ಮತ್ತು ಮತ್ತೊಬ್ಬ ಪೊಲೀಸ್ ಅಧಿಕಾರಿ ಸಚಿನ್ ವಝೆ ಮಾಡಿದ ಸುಳ್ಳು ಆರೋಪದ ಮೇಲೆ ನನ್ನನ್ನು ಜೈಲಿಗೆ ಹಾಕಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ, ಅದೇ ಪರಂಬೀರ್ ಸಿಂಗ್ ನಂತರ ತನಿಖಾ ಸಮಿತಿಗೆ ತಮ್ಮ ಹೇಳಿಕೆಗಳು ವದಂತಿ ಅಥವಾ ಕಿವಿಮಾತುಗಳನ್ನು ಆಧರಿಸಿದ್ದವು. ನನ್ನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಗಮನಿಸಿಯೇ ಬಾಂಬೆ ಹೈಕೋರ್ಟ್ ನನ್ನನ್ನು ಬಿಡುಗಡೆ ಮಾಡಿದೆ ಎಂದು ದೇಶಮುಖ್ ತಿಳಿಸಿದರು. ಇದೇ ವೇಳೆ ಸಚಿನ್ ವಝೆ ಸಹ ಕ್ರಿಮಿನಲ್ ಮನೋಭಾವ ಹೊಂದಿದ್ದು, ಅವರನ್ನು ಮಹಾರಾಷ್ಟ್ರ ಸರ್ಕಾರವು ಪೊಲೀಸ್ ಇಲಾಖೆಯಿಂದ ಮೂರು ಬಾರಿ ಅಮಾನತುಗೊಳಿಸುತ್ತಿತ್ತು ಎಂದೂ ಹೇಳಿದರು.
ಇದನ್ನೂ ಓದಿ:ಎನ್‌ಸಿಪಿ ನಾಯಕ ಅನಿಲ್ ದೇಶಮುಖ್ಗೆ ಜಾಮೀನು ನೀಡಿದ ಹೈಕೋರ್ಟ್: ಇಡಿ ಆಕ್ಷೇಪ ಬೆನ್ನಲ್ಲೇ ಆದೇಶಕ್ಕೆ ತಡೆ
ಒಬ್ಬ ಅಧಿಕಾರಿಯಾಗಿ ಸಚಿನ್ ವಝೆ, ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ 'ಆಂಟಿಲಿಯಾ' ನಿವಾಸದ ಹೊರಗೆ ಸ್ಫೋಟಕ ತುಂಬಿದ ವಾಹನವನ್ನು ನಿಲ್ಲಿಸುವ ಕೃತ್ಯದಲ್ಲಿ ಭಾಗಿಯಾಗಿದ್ದರು. ಇಂತಹ ವಝೆ ಹೇಳಿಕೆಗಳು ಸಹ ವಿಶ್ವಾಸಾರ್ಹವಲ್ಲ ಎಂದು ಉಚ್ಚ ನ್ಯಾಯಾಲಯವು ಗಮನಿಸಿದೆ. ಈ ಆಧಾರರಹಿತ ಆರೋಪಗಳ ಆಧಾರದ ಮೇಲೆ ನಾನು ಸುಮಾರು ಜೈಲುವಾಸ ಅನುಭವಿಸಬೇಕಾಯಿತು ಎಂದರು.
ಆದರೆ, ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಾಂಗಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲದೇ, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಈ ಅಗ್ನಿಪರೀಕ್ಷೆಯ ಉದ್ದಕ್ಕೂ ನನ್ನ ಬೆನ್ನಿಗೆ ನಿಂತಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸಾಹೇಬ್ ಮತ್ತು ಅವರ ಕುಟುಂಬ, ಇತರ ಎಲ್ಲ ನಾಯಕರು ಮತ್ತು ಇಡೀ ಪಕ್ಷಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ದೇಶಮುಖ್ ಕೈ ಮುಗಿದು ಹೇಳಿದರು.
ದೇಶಮುಖ್ ಸ್ವಾಗತಕ್ಕೆ ಹಿರಿಯ ನಾಯಕರ ದಂಡು: 13 ತಿಂಗಳ ನಂತರ ಜೈಲಿನಿಂದ ಹೊರಬಂದ ದೇಶಮುಖ್ ಸ್ವಾಗತಕ್ಕೆ ಎನ್ಸಿಪಿಯ ಹಿರಿಯ ನಾಯಕರ ದಂಡೇ ಬಂದಿತ್ತು. ವಿರೋಧ ಪಕ್ಷದ ನಾಯಕರಾದ ಅಜಿತ್ ಪವಾರ್, ವಿಧಾನಮಂಡಲದ ಅಧಿವೇಶನ ಬಿಟ್ಟು ನಾಗ್ಪುರದಿಂದ ವಿಶೇಷ ಸರ್ಕಾರಿ ವಿಮಾನದಲ್ಲಿ ಜೈಲಿನ ಬಳಿಗೆ ಬಂದಿದ್ದರು.
ಅಲ್ಲದೇ, ಅವರ ಸೋದರಸಂಬಂಧಿ ಮತ್ತು ಸಂಸದೆ ಪ್ರಿಯಾಯಾ ಸುಳೆ, ಎನ್‌ಸಿಪಿ ನಾಯಕರಾದ ಜಯಂತ್ ಪಾಟೀಲ್, ಪ್ರಫುಲ್ ಪಟೇಲ್, ಮಾಜಿ ಸಚಿವರಾದ ದಿಲೀಪ್ ವಾಲ್ಸೆ ಪಾಟೀಲ್, ಛಗನ್ ಭುಜಬಲ್, ಸಂಸದರು ಮತ್ತು ಶಾಸಕರು ಆಗಮನಿಸಿ ದೇಶಮುಖ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಅಲ್ಲದೇ, ನೂರಾರು ಕಾಯಕರ್ತರು ತಮ್ಮ ಹರ್ಷೋದ್ಗಾರ, ಚಪ್ಪಾಳೆ, ಹೂಗಳ ಸುರಿಮಳೆಯೊಂದಿಗೆ ಸ್ವಾಗತಿಸಿದರು.
ಅನಿಲ್ ದೇಶಮುಖ್ ವಿರುದ್ಧದ ಆರೋಪವೇನು?:ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಮಾಡಿದ 100 ಕೋಟಿ ರೂಪಾಯಿ ವಸೂಲಿ ಆರೋಪದ ಮೇಲೆ ಅನಿಲ್ ದೇಶಮುಖ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವು ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು.
ಅಲ್ಲದೇ, ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮುಂಬೈನ ವಿವಿಧ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 4.7 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಅಕ್ರಮವಾಗಿ ಗಳಿಸಿದ ಈ ಹಣವನ್ನು ತಮ್ಮ ಕುಟುಂಬಕ್ಕೆ ಸೇರಿದ ನಾಗ್ಪುರ ಮೂಲದ ಶ್ರೀಸಾಯಿ ಶಿಕ್ಷಣ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿದ್ದವು. ಇದಾದ ನಂತರ 2021ರ ನವೆಂಬರ್ 2ರಂದು ಇಡಿ ಅಧಿಕಾರಿಗಳು ಅನಿಲ್ ದೇಶಮುಖ್ ಅವರನ್ನು ಬಂಧಿಸಿದ್ದರು. ಅಲ್ಲಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದರು.
ಇದನ್ನೂ ಓದಿ:ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ಬಳಸಿದ 8 ಕಾರು ವಶಕ್ಕೆ ಪಡೆದ ಐಎನ್ಎ