ನವದೆಹಲಿ :ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಅವರು ದೆಹಲಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 97 ವರ್ಷ ವಯಸ್ಸಾಗಿತ್ತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಇವರು ನಾಗರೀಕರ ಸ್ವಾತಂತ್ರ್ಯಗಳ ಧುರೀಣರಾಗಿದ್ದರು.
ಅನೇಕ ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದ ಶಾಂತಿ ಭೂಷಣ್ ಅವರು, ಅಲಹಾಬಾದ್ ಹೈಕೋರ್ಟ್ನಲ್ಲಿ ರಾಜ್ ನಾರಾಯಣ್ ಅವರನ್ನು ಪ್ರತಿನಿಧಿಸಿ ಪ್ರಸಿದ್ಧಿ ಪಡೆದಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಇಂದಿರಾ ಗಾಂಧಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಅಷ್ಟೇ ಅಲ್ಲದೆ 1974ರಲ್ಲಿ ಇಂದಿರಾಗಾಂಧಿಯವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿ ಆದೇಶ ಹೊರಡಿಸಿತ್ತು. ಇದು ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಇದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿತ್ತು.
ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ :ಸದಾ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದ ಶಾಂತಿ ಭೂಷಣ್ ಅವರು ಮೊರಾರ್ಜಿ ದೇಸಾಯಿ ಅವರ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರು 1977 ರಿಂದ 1979ರವರೆಗೆ ಕಾನೂನು ಸಚಿವರಾಗಿದ್ದರು.
1980ರಲ್ಲಿ ಇವರು 'ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್' ಎಂಬ ಎನ್‌ಜಿಒವನ್ನು ಸ್ಥಾಪಿಸಿದರು. ಈ ಎನ್ಜಿಒ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಪ್ರಮುಖ ಪಿಐಎಲ್‌ಗಳನ್ನು ಸಲ್ಲಿಸಿತ್ತು. ಅಷ್ಟೇ ಅಲ್ಲದೆ 2018ರಲ್ಲಿ, 'ಮಾಸ್ಟರ್ ಆಫ್ ರೋಸ್ಟರ್' ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಕೋರಿ ಇವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
44ನೇ ಸಂವಿಧಾನ ತಿದ್ದುಪಡಿ ಮಾಡಿ ಹೆಸರುವಾಸಿ:ಇಂದಿರಾ ಗಾಂಧಿ ಸರ್ಕಾರ ಮಾಡಿದ್ದ ಅನೇಕ ಕಾನೂನಿನ ನಿಬಂಧನೆಗಳನ್ನು ರದ್ದುಗೊಳಿಸಿ ಭಾರತದ ಸಂವಿಧಾನದ 44ನೇ ತಿದ್ದುಪಡಿ ಪರಿಚಯಿಸಿ ಹೆಸರುವಾಸಿಯಾಗಿದ್ದರು.ದೇಶದ ಪ್ರಮುಖ ಕಾನೂನು ತಜ್ಞರಲ್ಲಿ ಒಬ್ಬರಾಗಿದ್ದ ಭೂಷಣ್ ಅವರು ಕಾನೂನುಗಳಲ್ಲಿ ಹಲವು ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕಾಂಗ್ರೆಸ್ನಿಂದ ರಾಜಕೀಯ ಜೀವನ ಆರಂಭ:ಕಾಂಗ್ರೆಸ್ನಿಂದ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿದ್ದ ಭೂಷಣ್ ಅವರು, ಬಳಿಕ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರು 1977ರಿಂದ 1980ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. 1980 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಇವರು ನಂತರ 1986 ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಬಳಿಕ ಆಮ್ ಆದ್ಮಿ ಪಕ್ಷ ಕಟ್ಟಿದ ಇವರು, ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಇವರ ಮಗ ಅಡ್ವೊಕೇಟ್ ಪ್ರಶಾಂತ್ ಭೂಷಣ್ ಕೂಡ ಪ್ರಸಿದ್ಧ ವಕೀಲರಾಗಿದ್ದಾರೆ.