ನವದೆಹಲಿ:ಇತ್ತೀಚೆಗಷ್ಟೇ ಎಂಟು ಮಾಜಿ ನ್ಯಾಯಾಧೀಶರು, 97 ನಿವೃತ್ತ ಅಧಿಕಾರಿಗಳು ಮತ್ತು 92 ಸಶಸ್ತ್ರ ಪಡೆಗಳ ನಿವೃತ್ತರಿದ್ದ 'ಸಾಂವಿಧಾನಿಕ ನಡವಳಿಕೆ ಗುಂಪು' ಎಂಬ ಕೂಟ ಪ್ರಧಾನಿಗೆ ಬಹಿರಂಗ ಪತ್ರ ಬರೆದು, ಬಿಜೆಪಿ ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ದ್ವೇಷದ ರಾಜಕಾರಣ ನಿಲ್ಲಿಸಲು ಕರೆ ನೀಡುವಂತೆ ಮನವಿ ಮಾಡಿದ್ದರು. ಈಗ ಮತ್ತೊಂದು ಗುಂಪು ಪ್ರಧಾನಿ ಮೋದಿ ನೇತೃತ್ವದ ಆಡಳಿತವನ್ನು ಸಮರ್ಥಿಸಿಕೊಂಡಿದೆ.
'ಕಾಳಜಿಯುಳ್ಳ ನಾಗರಿಕರು' ಎಂದು ಕರೆದುಕೊಂಡಿರುವ ಮಾಜಿ ನ್ಯಾಯಾಧೀಶರು, ಮಾಜಿ ಅಧಿಕಾರಿಗಳ ಗುಂಪು ಸಿಸಿಜಿ ಅಂದರೆ ಸಾಂವಿಧಾನಿಕ ನಡವಳಿಕೆ ಗುಂಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮೋದಿ ಆಡಳಿತವನ್ನು ಸಮರ್ಥನೆ ಮಾಡಿಕೊಂಡಿದೆ. ಸಿಸಿಜಿಯಲ್ಲಿನ ಸದಸ್ಯರು ಸಾರ್ವಜನಿಕ ಅಭಿಪ್ರಾಯವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಪ್ರಾಮಾಣಿಕವಾದ ಪ್ರೇರಣೆಗಳಿವೆ ಎಂಬುದನ್ನು ನಾವು ನಂಬುವುದಿಲ್ಲ ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ಇರುವುದೇನು?
- ಸಾರ್ವಜನಿಕ ಅಭಿಪ್ರಾಯ ಮೋದಿಯವರ ಪರವಾಗಿ ಗಟ್ಟಿಯಾಗಿದೆ. ಅದರ ವಿರುದ್ಧ 'ಸಾಂವಿಧಾನಿಕ ನಡವಳಿಕೆ ಗುಂಪು' ಹತಾಶೆ ಹೊರಹಾಕಿದೆ.
- ಸಿಸಿಜಿಯಲ್ಲಿ ಸಹಿ ಹಾಕಿರುವ ಮಾಜಿ ನ್ಯಾಯಾಧೀಶರು ಮತ್ತು ಅಧಿಕಾರಿಗಳು ದೇಶದಲ್ಲಿ ದ್ವೇಷದ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ.
- ಪೂರ್ವಗ್ರಹಗಳು ಮತ್ತು ಸುಳ್ಳು ಮಾಹಿತಿಯೊಂದಿಗೆ ಪ್ರಸ್ತುತ ಕೇಂದ್ರ ಸರ್ಕಾರದ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ.
- ಸಿಸಿಜಿ ಗುಂಪು ಪ್ರಸ್ತುತ ಇರುವ ಸಮಸ್ಯೆಗಳಿಗೆ ಅವರದೇ ಆದ ಸಿನಿಕತನದ ಮತ್ತು ತತ್ವರಹಿತ ಪರಿಹಾರ ವಿಧಾನ ನೀಡಲು ಯತ್ನಿಸುತ್ತಿವೆ.
- ವಿವಿಧ ರಾಜಕೀಯ ಪಕ್ಷಗಳು ಆಳುವ ವಿವಿಧ ರಾಜ್ಯಗಳಲ್ಲಿನ ಬಹು ಹಿಂಸಾತ್ಮಕ ಘಟನೆಗಳಿಗೆ ಇದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
- ಮಾನವ ಹಕ್ಕುಗಳ ಉಲ್ಲಂಘನೆಗೂ ಸಿನಿಕತನ ಪರಿಹಾರದ ಮೂಲಕ ಬಡವರ ಜೀವನೋಪಾಯದ ಮೇಲೆ ಪರಿಣಾಮ ಬೀರುವಂತೆ ಮಾಡಲಾಗುತ್ತಿದೆ.
- ಬಿಜೆಪಿ ಸರ್ಕಾರದ ಅಡಿಯಲ್ಲಿ ದೊಡ್ಡ ದೊಡ್ಡ ಕೋಮು ಹಿಂಸಾಚಾರ ಘಟನೆಗಳು ಅಥವಾ ನಿದರ್ಶನಗಳು ಕಡಿಮೆಯಾಗಿರುವುದು ಸ್ಪಷ್ಟ.
- ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ಹಿಂಸಾಚಾರಗಳನ್ನು ಕಡಿಮೆ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿವೆ.
- ಸಿಸಿಜಿಯಂಥ ಗುಂಪುಗಳು ಯಾವುದೇ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗದ ಕೋಮುಗಲಭೆಗಳನ್ನು ಹೈಲೈಟ್ ಮಾಡಲು ಯತ್ನಿಸಿವೆ.
- ಸಿಸಿಜಿ ಬರೆದ ಪತ್ರದಲ್ಲಿ ದೇಶದಲ್ಲಿ ದ್ವೇಷದ ಬಗ್ಗೆ ಉಲ್ಲೇಖಿಸಲಾಗಿದ್ದು, ಇದು ಸುಳ್ಳು ನಿರೂಪಣೆಯನ್ನು ವರ್ಣರಂಜಿತವಾಗಿಸಲಾಗಿದೆ.
- ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ನವದೆಹಲಿಯಲ್ಲಿ ಹಿಂದೂ ಹಬ್ಬಗಳ ಸಮಯದಲ್ಲಿ ನಡೆದ ದಾಳಿ ಪರೋಕ್ಷ ಸಮರ್ಥನೆ ಸಿಸಿಜಿ ಉದ್ದೇಶ.
- ಸಮಸ್ಯೆಯಲ್ಲದ್ದನ್ನು ಸಮಸ್ಯೆಯನ್ನಾಗಿಸುವುದು ಮತ್ತು ವಿಕೃತ ಚಿಂತನೆ ಹರಡುವುದು ಸಾಂವಿಧಾನಿಕ ನಡವಳಿಕೆ ಗುಂಪಿನ ಉದ್ದೇಶ.
- ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ವಿರುದ್ಧ ಪ್ರಚೋದಿತ ಟೀಕೆಗಳನ್ನು ಮಾಡಿ ಅಂತಾರಾಷ್ಟ್ರೀಯ ಗಮನ ಸೆಳೆಯಲು ಯತ್ನಿಸಲಾಗುತ್ತಿದೆ.
- ಹಿಜಾಬ್ ಮತ್ತು ಹಲಾಲ್ ವಿಚಾರದಲ್ಲಿ ಮುಸ್ಲಿಂ ಶೋಷಣೆ ಎಂದು ಬಿಂಬಿಸಿ, ಅಂತಾರಾಷ್ಟ್ರೀಯ ಪ್ರೋತ್ಸಾಹ ಪಡೆಯಲು ಸಿಸಿಜಿ ಯತ್ನಿಸಲಾಗುತ್ತಿದೆ.
ಈ ಎಲ್ಲಾ ಅಂಶಗಳನ್ನು ಒತ್ತಿ ಹೇಳಿದ 'ಕಾಳಜಿಯುಳ್ಳ ನಾಗರಿಕರು' ಇನ್ನಾದರೂ 'ಸಾಂವಿಧಾನಿಕ ನಡವಳಿಕೆ ಗುಂಪು ವೈಯಕ್ತಿಕ ಪಕ್ಷಪಾತದಿಂದ ಮುಕ್ತವಾಗಲು ಮತ್ತು ಭಯ ಮತ್ತು ಸುಳ್ಳುಗಳನ್ನು ಹರಡದಂತೆ ಮನವಿ ಮಾಡಿದೆ.
ಇದನ್ನೂ ಓದಿ:ದ್ವೇಷ ರಾಜಕಾರಣ ನಿಲ್ಲಿಸುವಂತೆ ಕರೆ ನೀಡಲು ಮೋದಿಗೆ 100ಕ್ಕೂ ಅಧಿಕ ಮಾಜಿ ಅಧಿಕಾರಿಗಳಿಂದ ಪತ್ರ