ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ 10 ವರ್ಷಗಳ ಮಾನ್ಯತೆಯೊಂದಿಗೆ ಪಾಸ್‌ಪೋರ್ಟ್ ನೀಡಲಾಗಿದೆ. ದೆಹಲಿ ಹೈಕೋರ್ಟ್‌ನಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಮೆಹಬೂಬಾ ಅವರಿಗೆ ಪಾಸ್‌ಪೋರ್ಟ್ ತಲುಪಿಸಲಾಗಿದೆ.
ಮೆಹಬೂಬಾ ಮುಫ್ತಿ ಅವರ ಪಾಸ್‌ಪೋರ್ಟ್ ಅವಧಿಯು 2019ರಲ್ಲಿ ಮುಕ್ತಾಯವಾಗಿತ್ತು. ಅಂದಿನಿಂದ ಅದರ ನವೀಕರಣವನ್ನು ಬಯಸುತ್ತಿದ್ದರು. ಇದರ ನಡುವೆ 2021ರ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವರದಿ ಮೇರೆಗೆ ಮೆಹಬೂಬಾ ಮತ್ತು ಅವರ ತಾಯಿಗೆ ಪಾಸ್‌ಪೋರ್ಟ್ ನಿರಾಕರಿಸಲಾಗಿತ್ತು. ಇದೀಗ 2023ರ ಜೂನ್ 1ರಿಂದ 2033ರ ಮೇ 31ರವರೆಗೆ ಪಾಸ್‌ಪೋರ್ಟ್ ಮಾನ್ಯವಾಗಿರುವಂತೆ ವಿತರಿಸಲಾಗಿದೆ.
ಇದನ್ನೂ ಓದಿ:ಜಮ್ಮು ಮತ್ತು ಕಾಶ್ಮೀರ: ಮೆಹಬೂಬಾ ಮುಫ್ತಿ ತಾಯಿಗೆ ಪಾಸ್‌ಪೋರ್ಟ್ ನೀಡುವಂತೆ ಕೋರ್ಟ್ ಆದೇಶ
ಮೆಹಬೂಬಾ ಅವರ ಪುತ್ರಿ ಇಲ್ತಿಜಾ ನಿರ್ದಿಷ್ಟ ದೇಶಕ್ಕೆ ಪಾಸ್‌ಪೋರ್ಟ್ ನೀಡುವ ಪಾಸ್‌ಪೋರ್ಟ್ ಕಚೇರಿಯ ನಿರ್ಧಾರವನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಎರಡು ದಿನಗಳು ನಡೆಯಬೇಕಿದ್ದು, ಇದಕ್ಕೂ ಮುಂಚೆಯೇ ಮೆಹಬೂಬಾ ಅವರಿಗೆ ಪಾಸ್‌ಪೋರ್ಟ್ ನೀಡಲಾಗಿದೆ. ಮತ್ತೊಂದೆಡೆ, ಮುಫ್ತಿ ಅವರಿಗೆ ಹೊಸ ಪಾಸ್‌ಪೋರ್ಟ್ ನೀಡುವ ಬಗ್ಗೆ ಮೂರು ತಿಂಗಳೊಳಗೆ ನಿರ್ಧರಿಸುವಂತೆ ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಕಳೆದ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್ ಸೂಚಿಸಿತ್ತು.
ಹೊಸ ಪಾಸ್‌ಪೋರ್ಟ್ ನೀಡಿಕೆಗೆ ಸಂಬಂಧಿಸಿದಂತೆ ತನ್ನ ಮೇಲ್ಮನವಿಯ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮೆಹಬೂಬಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅನೇಕ ಬಾರಿ ಮನವಿ ಮಾಡಿದ್ದರೂ ಹೊಸ ಪಾಸ್‌ಪೋರ್ಟ್ ನೀಡಲು ಸಾಕಷ್ಟು ವಿಳಂಬವಾಗುತ್ತಿದೆ. ನನ್ನ ಮನವಿಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಮ್ಮ ಅರ್ಜಿಯಲ್ಲಿ ದೂರಿದ್ದರು.
ಆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮರುಪರಿಶೀಲನೆಗಾಗಿ ಜಮ್ಮು ಮತ್ತು ಕಾಶ್ಮೀರದ ಪಾಸ್‌ಪೋರ್ಟ್ ಅಧಿಕಾರಿಗೆ ವಿಷಯವನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಮೆಹಬೂಬಾ ಪಾಸ್‌ಪೋರ್ಟ್ ನೀಡಿಕೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಮಧ್ಯಸ್ಥಿಕೆಯನ್ನು ಕೋರಿದ್ದರು. ಕಳೆದ ಮೂರು ವರ್ಷಗಳಿಂದ ತನ್ನ 80 ವರ್ಷದ ತಾಯಿಯನ್ನು ಮೆಕ್ಕಾಗೆ ತೀರ್ಥಯಾತ್ರೆಗೆ ಕರೆದೊಯ್ಯಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ:ಪಾಸ್‌ಪೋರ್ಟ್ ನವೀಕರಣ ಮಾಡಿಸಿ ಕೊಡಿ: ವಿದೇಶಾಂಗ ಸಚಿವರಿಗೆ ಪತ್ರ ಬರೆದ ಮೆಹಬೂಬಾ ಮುಫ್ತಿ