ನವದೆಹಲಿ: ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಮತ್ತು ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್ (75) ಗುರುವಾರ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಹಿರಿಯ ನಾಯಕನ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ತಂದೆಯ ಸಾವಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಗಳು ಸುಭಾಷಿಣಿ ಶರದ್ ಯಾದವ್ ಟ್ವಿಟರ್ ಪೋಸ್ಟ್ ಮಾಡಿದ್ದಾರೆ. 'ನನ್ನ ತಂದೆ ಇನ್ನಿಲ್ಲ' ಎಂದು ಭಾವುಕರಾಗಿ ಟ್ವೀಟ್ ಮಾಡುವ ಮೂಲಕ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. "ಯಾದವ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ಕರೆತರಲಾಯಿತು. ಪರೀಕ್ಷೆ ಬಳಿಕ ಅವರ ರಕ್ತದೊತ್ತಡ ಮತ್ತು ನಾಡಿಮಿಡಿತ ನಿಂತಿರುವುದು ತಿಳಿದುಬಂತು. ಎಷ್ಟೇ ಪ್ರಯತ್ನ ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾತ್ರಿ 10.19 ಕ್ಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು" ಎಂದು ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಹಿರಿಯ ಜೆಡಿಯು ನಾಯಕ ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಅವರ ಛತ್ತರ್‌ಪುರ ನಿವಾಸದಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಯಾದವ್ ಅವರ ಸಂಬಂಧಿಯೊಬ್ಬರು ಮಾಹಿತಿ ನೀಡಿದರು.
ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ: ಮಾಜಿ ಕೇಂದ್ರ ಸಚಿವ ಯಾದವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ಶ್ರೀ ಶರದ್ ಯಾದವ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಸುದೀರ್ಘ ವರ್ಷಗಳ ಕಾಲ ಅವರು ಸಾರ್ವಜನಿಕ ಜೀವನದಲ್ಲಿ ಸಂಸದರಾಗಿ ಮತ್ತು ಸಚಿವರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಡಾ. ಲೋಹಿಯಾ ಅವರ ಆದರ್ಶಗಳಿಂದ ಹೆಚ್ಚು ಪ್ರೇರಿತರಾಗಿದ್ದರು. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ, ಯಾದವ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.