ಬೆಂಗಳೂರು:ಸೂರ್ಯನ ಅಧ್ಯಯನದ ಆದಿತ್ಯ-ಎಲ್ 1 ಯೋಜನೆಯ ಆರಂಭಿಕ ಹಂತಗಳು ಯಶಸ್ವಿಯಾಗಿ ಕಾರ್ಯಗತಗೊಳ್ಳುವಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಹಾಗೂ 'ಉಪಗ್ರಹ ಪಿತಾಮಹ' ಎಂದೇ ಖ್ಯಾತರಾಗಿದ್ದ ದಿ.ಪ್ರೊ.ಯು.ಆರ್.ರಾವ್ ಅವರ ಪಾತ್ರ ಹಿರಿದು ಎಂದು ಇಸ್ರೋ ಹೇಳಿದೆ. 'ಆದಿತ್ಯ-ಎಲ್ 1 ಯು.ಆರ್.ರಾವ್ ಕನಸಿನ ಯೋಜನೆ'. ರಾವ್ ಅವರು ಈ ಯೋಜನೆಯನ್ನು ಸಮಕಾಲೀನ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿಸಲು ವಿಶೇಷ ಒತ್ತು ನೀಡಿದ್ದರು. ನೌಕೆಯನ್ನು ಕಕ್ಷೆಗೆ ಸೇರಿಸುವುದೂ ಸೇರಿ ಒಟ್ಟು ಗುರಿ ಸಾಧನೆಗೆ ಯೋಜನೆ ರೂಪಿಸಿದ್ದರು. 'ಭಾರತದಿಂದ ಲಗ್ರಾಂಜಿಯನ್ ಪಾಯಿಂಟ್‌ಗೆ ಸೇರಿಸುವ ಮೊದಲ ಯೋಜನೆ ಆದಿತ್ಯ-ಎಲ್ 1 ಆಗಿದೆ. ಯು.ಆರ್.ರಾವ್ ಅವರಿಗೆ ಧನ್ಯವಾದಗಳು' ಎಂದು ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ಕೃತಜ್ಞತಾ ಸಂದೇಶ ಪ್ರಕಟಿಸಿದೆ.
ಆದಿತ್ಯ-ಎಲ್1 ಯಶಸ್ವಿ ಉಡಾವಣೆಯ ನಂತರ ನಿನ್ನೆ (ಶನಿವಾರ) ಮಾತನಾಡಿದ ಯೋಜನೆಯ ನಿರ್ದೇಶಕಿ ನಿಗರ್ ಶಾಜಿ, ಯು.ಆರ್.ರಾವ್ ಕೊಡುಗೆಯನ್ನು ಉಲ್ಲೇಖಿಸಿದರು. ಈ ಯೋಜನೆಯ ಬೀಜ ಬಿತ್ತಿದ್ದ ರಾವ್ ಅವರನ್ನು ಸ್ಮರಿಸುವೆ ಎಂದು ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ (ಐಐಎ) ಪ್ರೊ.ಜಗ್‌ದೇವ್ ಸಿಂಗ್ , ಯೋಜನೆಯ ಆರಂಭಿಕ ದಿನಗಳಲ್ಲಿ ಯು.ಆರ್ ರಾವ್ ಅವರ ಸೇವೆಯನ್ನು ನೆನಪಿಸಿಕೊಂಡರು. ಆದಿತ್ಯ ಎಲ್-1ನಲ್ಲಿ ಅಳವಡಿಸಿರುವ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (ವಿಇಎಲ್‌ಸಿ) ಪರಿಕರವನ್ನು ಐಐಎ ಅಭಿವೃದ್ಧಿಪಡಿಸಿದೆ. ಇಸ್ರೋ ಮೊದಲು ನಮಗೆ 50 ಸೆಂ.ಮೀ. ಸಣ್ಣ ವೇದಿಕೆ ಒದಗಿಸಿತು. ನಾವು ಪರಿಕರ ರೂಪಿಸಲು ಆರಂಭಿಸಿದೆವು. ಆಗ, ಸೂರ್ಯನನ್ನು ವರ್ಷದ 365 ದಿನಗಳ ನಿರಂತರ ಅಧ್ಯಯನ ಮಾಡಲು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಉಪಗ್ರಹ ಇರಿಸುವುದು ಸೂಕ್ತ ಎಂಬ ಆಲೋಚನೆ ಬಂದಿತ್ತು.
ಆದರೆ, ಗ್ರಹಣವಿದ್ದಾಗ ಸೂರ್ಯನ ಅಧ್ಯಯನ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಂತದಲ್ಲಿ ಧ್ರುವಕಕ್ಷೆಗೆ ಬದಲಾಗಿ ಎಲ್ 1ನಲ್ಲಿ ಉಪಗ್ರಹ ಇರಿಸುವುದು ಸೂಕ್ತವೆಂದು ರಾವ್ ಸಲಹೆ ನೀಡಿದ್ದರು ಎಂದು ಜಗದೇವ್ ಸಿಂಗ್ ತಿಳಿಸಿದರು. ಆ ನಂತರವು ವಿಇಎಲ್‌ಸಿ ಪರಿಕರದೊಂದಿಗೆ ಇನ್ನೂ 6 ಪರಿಕರಗಳನ್ನು ಎಲ್ 1 ಸೇರಲಿರುವ ಆದಿತ್ಯ ಉಪಗ್ರಹದಲ್ಲಿ ಅಳವಡಿಸಲು ತೀರ್ಮಾನಿಸಲಾಯಿತು. ಹೀಗಾಗಿ, ಉಪಗ್ರಹ ಮತ್ತು ಯೋಜನೆಯ ಗಾತ್ರ ವಿಸ್ತಾರಗೊಂಡಿತು ಎಂದರು.