ಶಿಮ್ಲಾ(ಹಿಮಾಚಲ ಪ್ರದೇಶ) : ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ (87) ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶಿಮ್ಲಾದ ಇಂದಿರಾಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಜಾನಕ್ ರಾಜ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ವಿಧಿವಶ ಅಗಲಿದ ಹಿರಿಯ ನಾಯಕನಿಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
ಏಪ್ರಿಲ್ 13 ರಂದು ಅವರಿಗೆ ಕೋವಿಡ್ ದೃಢಪಟ್ಟಿದ್ದು, ಮೊಹಾಲಿನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚೇತರಿಸಿಕೊಂಡ ಕೆಲವೇ ದಿನಗಳಲ್ಲಿ ಮತ್ತೆ ವೀರಭದ್ರ ಸಿಂಗ್ಗೆ ಕೋವಿಡ್ ದೃಢಪಟ್ಟಿತ್ತು. ಜತೆಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದರಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಹಾಗಾಗಿ ಹೃದ್ರೋಗ ವಿಭಾಗದ ವೈದ್ಯರು ಅವರ ಮೇಲೆ ನಿಗಾ ಇರಿಸಿದ್ದರು. ತೀವ್ರ ಉಸಿರಾಟದಿಂದ ಬಳಲುತ್ತಿದ್ದ ಸಿಂಗ್ರನ್ನು ವೆಂಟಿಲೇಟರ್ಗೆ ಸ್ಥಳಾಂತರಿಸಲಾಗಿತ್ತು.
ಒಂಬತ್ತು ಬಾರಿ ಶಾಸಕ ಮತ್ತು ಐದು ಬಾರಿ ಸಂಸತ್ ಸದಸ್ಯರಾಗಿದ್ದ ಸಿಂಗ್, ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.