ನವದೆಹಲಿ:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ದೆಹಲಿ ವಿಶೇಷ ಸಿಬಿಐ ಕೋರ್ಟ್ ತೀರ್ಪು ಹೊರಹಾಕಿದೆ. 1993 ಮತ್ತು 2006ರ ನಡುವೆ ಚೌತಾಲಾ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂಬ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಅಕ್ರಮ ಆಸ್ತಿ ಪ್ರಕರಣದಲ್ಲಿ ಓಂ ಪ್ರಕಾಶ್ ಚೌಟಾಲ ಅವರಿಗೆ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಅವರ ನಾಲ್ಕು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಸಹ ಹೊರಹಾಕಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ದೋಷಿ ಎಂದು ದೆಹಲಿಯ ಸಿಬಿಐ ಕೋರ್ಟ್ ಕಳೆದ ಶನಿವಾರ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
1993 ಮತ್ತು 2006 ರ ನಡುವೆ 6.09 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕ್ರೋಢೀಕರಿಸಿದ ಆರೋಪದ ಮೇಲೆ ಮಾರ್ಚ್ 26, 2010 ರಂದು ಕೇಂದ್ರೀಯ ತನಿಖಾ ದಳವು ಚೌಟಾಲ ವಿರುದ್ಧ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತು. ಸಿಬಿಐ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಈ ತೀರ್ಪು ನೀಡಿದ್ದು, ಭ್ರಷ್ಟಾಚಾರ ತಡೆ ಕಾಯಿದೆ, 1988 ರ 13 (2) ಸೆಕ್ಷನ್ 13 (1) (ಇ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಈ ಹಿಂದೆ 2013ರಲ್ಲಿ 3,206 ಕಿರಿಯ ಶಿಕ್ಷಕರನ್ನು (ಜೆಬಿಟಿ) ಅಕ್ರಮವಾಗಿ ನೇಮಕ ಮಾಡಿದ ಪ್ರಕರಣದಲ್ಲಿ ಒಪಿ ಚೌಟಾಲ ಮತ್ತು ಇತರರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಪೆರೋಲ್ ಪಡೆದುಕೊಂಡು ಅವರು ಹೊರಬಂದಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ಇವರ ವಿರುದ್ಧ 2021ರ ಜನವರಿ ತಿಂಗಳಲ್ಲಿ ಪ್ರಕರಣ ದಾಖಲು ಮಾಡಿಕೊಂಡಿತ್ತು. ಇದರ ವಿಚಾರಣೆ ನಡೆಸಿ, ಇಂದು ಮಹತ್ವದ ತೀರ್ಪು ಹೊರಹಾಕಲಾಗಿದೆ. ಇನ್ನು 2013ರಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭ್ರಷ್ಟಾಚಾರ ಮಾಡಿರುವ ಆರೋಪ ಸಾಬೀತುಗೊಂಡಿರುವ ಕಾರಣ ಓಂ ಪ್ರಕಾಶ್ ಹಾಗೂ ಅವರ ಅಜಯ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ಜುಲೈ 2021ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.