ಕರ್ನಾಟಕ

karnataka

ETV Bharat / bharat

Arunachalam: ಲಘು ಯುದ್ಧ ವಿಮಾನಗಳ ಖ್ಯಾತಿಯ ವಿಜ್ಞಾನಿ ಅರುಣಾಚಲಂ ನಿಧನ, ಪ್ರಧಾನಿ ಮೋದಿ ಸಂತಾಪ - VS Arunachalam died

ಡಿಆರ್​ಡಿಒ ಮಾಜಿ ಮಹಾನಿರ್ದೇಶಕ ವಿಎಸ್ ಅರುಣಾಚಲಂ ಅವರು ಅಮೆರಿಕದಲ್ಲಿ ಬುಧವಾರ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್​ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜ್ಞಾನಿ ಅರುಣಾಚಲಂ ನಿಧನ
ವಿಜ್ಞಾನಿ ಅರುಣಾಚಲಂ ನಿಧನ

By

Published : Aug 17, 2023, 10:07 AM IST

Updated : Aug 17, 2023, 10:14 AM IST

ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮಾಜಿ ಮಹಾನಿರ್ದೇಶಕ ವಿಎಸ್ ಅರುಣಾಚಲಂ(87) ಅವರು ಅಮೆರಿಕದಲ್ಲಿ ಬುಧವಾರ ನಿಧನರಾಗಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ತಂತ್ರಜ್ಞಾನ ಮತ್ತು ಪರಮಾಣು ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದ ಅರುಣಾಚಲಂ ಅವರು ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ. ದುಃಖ ಮತ್ತು ಭಾರದ ಮನಸ್ಸಿನಿಂದ ಇದನ್ನು ಪ್ರಕಟಿಸಬೇಕಿದೆ. ಅವರು ಚಿರನಿದ್ರೆಗೆ ಜಾರಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅರುಣಾಚಲಂ ಅವರ ಸಾಧನೆ:ವಿಎಸ್ ಅರುಣಾಚಲಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರಲ್ಲದೇ, ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC), ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ ಮತ್ತು ರಕ್ಷಣಾ ಮೆಟಲರ್ಜಿಕಲ್ ಸಂಶೋಧನಾ ಪ್ರಯೋಗಾಲಯದಾದ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದರು. 1982 - 92 ರ ಅವಧಿಯಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿದ್ದರು.

ರಾಯಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (UK) ಯ ಮೊದಲ ಭಾರತೀಯ ಫೆಲೋ ಆಗುವುದರ ಜೊತೆಗೆ, ಅರುಣಾಚಲಂ ಅವರು ಮೆಟೀರಿಯಲ್ಸ್ ರಿಸರ್ಚ್ ಸೊಸೈಟಿ ಬುಲೆಟಿನ್ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳು, ಸಲಹಾ ಮತ್ತು ಸಂಪಾದಕೀಯ ಮಂಡಳಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸ್ವಾಯತ್ತ ಸಂಸ್ಥೆಯ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA) ಅಡಿ ಲಘು ಯುದ್ಧ ವಿಮಾನ (LCA), ಅಡ್ವಾನ್ಸ್ಡ್ ಟೆಕ್ನಾಲಜಿ ವೆಸೆಲ್ (ಎಟಿವಿ) ಕಾರ್ಯಕ್ರಮ ಮತ್ತು ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ ಅಭಿವೃದ್ಧಿಪಡಿಸುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ.

2015 ರಲ್ಲಿ ಅರುಣಾಚಲಂ ಅವರಿಗೆ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಡಿಆರ್​ಡಿಒದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಎಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1980), ಪದ್ಮಭೂಷಣ (1985) ಮತ್ತು ಪದ್ಮ ವಿಭೂಷಣ (1990) ವನ್ನು ನೀಡಿ ಗೌರವಿಸಲಾಗಿದೆ.

ಪ್ರಧಾನಿ ಮೋದಿ ಸಂತಾಪ :ರಕ್ಷಣೆ ಮತ್ತು ವೈಜ್ಞಾನಿಕ ಕ್ಷೇತ್ರದ ನಕ್ಷತ್ರವೊಂದು ಕಳಚಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. 'ಡಾ.ವಿ.ಎಸ್. ಅರುಣಾಚಲಂ ಅವರ ನಿಧನವು ವೈಜ್ಞಾನಿಕ ಕ್ಷೇತ್ರ ಮತ್ತು ಕಾರ್ಯತಂತ್ರದ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಉಂಟುಮಾಡುತ್ತದೆ. ಅವರು ತಮ್ಮ ಜ್ಞಾನ, ಸಂಶೋಧನೆಯಿಂದಾಗಿ ಭಾರತದ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ಕೃಷ್ಟ ಕೊಡುಗೆ ನೀಡಿದ್ದಾರೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪಗಳು. ಓಂ ಶಾಂತಿ' ಎಂದು ಎಕ್ಸ್​ನಲ್ಲಿ(ಹಿಂದಿನ ಟ್ವಿಟರ್​) ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಎಕ್ಸ್​ನಲ್ಲಿ ನಿಧನದ ಬಗ್ಗೆ ಹಂಚಿಕೊಂಡಿದ್ದರು. "ರಕ್ಷಣಾ ಮಂತ್ರಿಯ ಮಾಜಿ ವೈಜ್ಞಾನಿಕ ಸಲಹೆಗಾರ ಡಾ.ವಿ ಎಸ್ ಅರುಣಾಚಲಂ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಅವರು ರಕ್ಷಣೆ, ತಂತ್ರಜ್ಞಾನ ಮತ್ತು ಪರಮಾಣು ವಿಷಯಗಳಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿದ್ದರು. ಭಾರತ-ಅಮೆರಿಕ ಸಂಬಂಧದ ಬಗ್ಗೆ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:'ತೈವಾನ್ ಕುರಿತು ಪ್ರಶ್ನಿಸಿದರೆ, ಬೆಂಕಿಯೊಂದಿಗೆ ಆಟವಾಡಿದಂತೆ': ಚೀನಾ ರಕ್ಷಣಾ ಸಚಿವರಿಂದ ಅಮೆರಿಕಕ್ಕೆ ಎಚ್ಚರಿಕೆ

Last Updated : Aug 17, 2023, 10:14 AM IST

ABOUT THE AUTHOR

...view details