ನವದೆಹಲಿ:ಭದ್ರತಾ ಪಡೆ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ನಕ್ಸಲರು ಹೊಂದಿದ್ದಾರೆ ಎಂದು ಗಡಿ ಭದ್ರತಾ ಪಡೆಯ ಮಾಜಿ ಮಾಹಾನಿರ್ದೇಶಕ ಪ್ರಕಾಶ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ದಾಳಿ ಬಗ್ಗೆ ಪ್ರಕಾಶ್ ಸಿಂಗ್ ಮಾತನಾಡಿದ್ದಾರೆ.
"ನಕ್ಸಲ್ ಸಮಸ್ಯೆ ದೇಶದಲ್ಲಿ ಇನ್ನೂ ದೂರವಾಗಿಲ್ಲ, ಈ ಬಗ್ಗೆ ಸರ್ಕಾರವು ಪರಿಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ನಕ್ಸಲರು ಒಡೆದಿರುವ ಶಕ್ತಿಯಲ್ಲ, ಅವರು ಇನ್ನೂ ದುಷ್ಕೃತ್ಯಗಳನ್ನು ಎಸಗುವ ಶಕ್ತಿಯನ್ನು ಹೊಂದಿದ್ದಾರೆ" ಎಂದು ಸಿಂಗ್ ಹೇಳಿದರು.
ದೇಶದಲ್ಲಿ ನಕ್ಸಲ್ ಸಮಸ್ಯೆ ಅಂತ್ಯಗೊಂಡಿದ್ದು, ನಕ್ಸಲ್ ಪ್ರದೇಶಗಳಲ್ಲಿ ಭಾರತೀಯ ಭದ್ರತಾ ಪಡೆಗಳು ಪ್ರಾಬಲ್ಯ ಸಾಧಿಸುತ್ತಿವೆ ಎಂಬ ಕೇಂದ್ರ ಗೃಹ ಸಚಿವಾಲಯ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, "ಹೌದು, ನಾವು ಪ್ರಾಬಲ್ಯ ಹೊಂದಿದ್ದೇವೆ. ಆದರೆ, ನಕ್ಸಲರು ಇನ್ನೂ ದೊಡ್ಡ ಮಟ್ಟದ ಹಾಗೂ ಮಾರಣಾಂತಿಕ ದಾಳಿ ನಡೆಸಲು ಸಮರ್ಥರಾಗಿದ್ದಾರೆ ಎಂದರು. 2024ರ ವೇಳೆಗೆ ನಕ್ಸಲ್ ಮುಕ್ತ ಭಾರತ ಗೊಳಿಸುವುದಾಗಿ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂತಹ ಹೇಳಿಕೆಯ ಬಗ್ಗೆ ಒಮ್ಮೆ ಆತ್ಮಾವಲೋಕನದ ಅಗತ್ಯವಿದೆ ಎಂದು ಸಿಂಗ್ ಸಲಹೆ ನೀಡಿದರು.
ಇನ್ನು ದಾಳಿಯ ನಂತರ ಗೃಹ ಸಚಿವ ಅಮಿತ್ ಶಾ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೇಂದ್ರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಆದಾಗ್ಯೂ, ಛತ್ತೀಸ್‌ಗಢಕ್ಕೆ ಹೆಚ್ಚಿನ ಕೇಂದ್ರೀಯ ಪಡೆಗಳನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಸಿಂಗ್ ಹೇಳಿದರು.