ನವದೆಹಲಿ:ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅನುಮತಿ ಮೇರೆಗೆ ಇಂದು ತಮ್ಮ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿಯಾಗಿದ್ದಾರೆ. ಸಿಸೋಡಿಯಾ ಅವರ ಪತ್ನಿ ಬಹುಕಾಲದಿಂದ ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯದ ಅನುಮತಿ ಪಡೆದು ಇಂದು ಬೆಳಗ್ಗೆ ಮಥುರಾ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಮನೀಶ್ ಸಿಸೋಡಿಯಾ ಪೊಲೀಸ್ ಸರ್ಪಗಾವಲೊಂದಿಗೆ ಬಂದು ಪತ್ನಿಯನ್ನು ವಿಚಾರಿಸಿದ್ದಾರೆ.
ಗುರುವಾರ ಮನೀಶ್ ಸಿಸೋಡಿಯಾ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಪತ್ನಿ ಭೇಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯದ ಸೆಷನ್ಸ್ ನ್ಯಾಯಧೀಶ ಎಂ.ಕೆ.ನಾಗ್ಪಾಲ್ ಸಿಸೋಡಿಯಾ ಅವರಿಗೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ಶುಕ್ರವಾರ ಅವಕಾಶ ನೀಡಿದ್ದರು. ಸಿಸೋಡಿಯ ಅರ್ಜಿಯಲ್ಲಿ 5 ದಿನದ ಮಟ್ಟಿಗೆ ಅನುಮತಿ ಕೇಳಿದ್ದರು. ಆದರೆ, ನ್ಯಾಯಾಲಯ ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾತ್ರ ಪತ್ನಿಯೊಂದಿಗಿರಲು ಅನುಮತಿ ನೀಡಿತ್ತು.
ಜೂನ್ನಲ್ಲಿ ಕೂಡ ಪತ್ನಿ ಭೇಟಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಮನೀಶ್: ಹೌದು ಈ ಹಿಂದೆ ಜೂನ್‌ನಲ್ಲಿಯೂ ಸಹ ದೆಹಲಿ ಹೈಕೋರ್ಟ್ ಸಿಸೋಡಿಯಾಗೆ ತಮ್ಮ ಪತ್ನಿಯ ಭೇಟಿಗೆ ಅವಕಾಶ ನೀಡಿತ್ತು. ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ ಭೇಟಿಯಾಗಲು ಅನುಮತಿ ನೀಡಿತ್ತು. ಇದಾದ ಬಳಿಕ ಇಂದಿನ ಭೇಟಿ ಎರಡನೇ ಬಾರಿಯದ್ದಾಗಿದೆ.