ಕೊಲ್ಕತ್ತಾ (ಪಶ್ಚಿಮ ಬಂಗಾಳ) : ಎರಡನೇ ಹಂತದ ಮತದಾನಕ್ಕೂ ಮುನ್ನ ಅಪರಿಚಿತರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾಗಿರುವ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಅವರಿಗೆ ವೈ+ ಭದ್ರತೆ ಒದಗಿಸಲಾಗಿದೆ.
ಅಶೋಕ್ ದಿಂಡಾಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆ ನೀಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚುನಾವಣಾ ಪ್ರಚಾರ ಮುಗಿಸಿ ಹಿಂದಿರುಗುತ್ತಿದ್ದಾಗ ಮೊಯ್ನಾ ಬಜಾರ್ ಬಳಿ ದಿಂಡಾ ಅವರ ಕಾರನ್ನು ಸುತ್ತುವರೆದ ಅಪರಿಚಿತರ ಗುಂಪು, ಕಲ್ಲು ತೂರಾಟ ನಡೆಸಿ ಕಾರಿನ ಗಾಜುಗಳನ್ನು ಒಡೆದು ಹಾಕಿದೆ. ಇದರಿಂದ ದಿಂಡಾ ಅವರ ಭುಜಕ್ಕೆ ಗಾಯಗಳಾಗಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರೇ ದಿಂಡಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.