ಮುಂಬೈ( ಮಹಾರಾಷ್ಟ್ರ): ಮಹಾವಿಕಾಸ ಅಘಾಡಿಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತೊಂದು ಆಪರೇಷನ್ ಮಾಡಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಕಾಂಗ್ರೆಸ್‌ನ ಮಾಜಿ ಸಚಿವ ಮತ್ತು ಮಾಜಿ ಸಂಸದ ಮಿಲಿಂದ್ ದಿಯೋರಾ ಶೀಘ್ರದಲ್ಲೇ ಶಿಂಧೆ ಅವರ ಶಿವಸೇನೆಗೆ ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಲು ದಿಯೋರಾ ಬಯಸಿದ್ದರು. ಆದರೆ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗದಿರಬಹುದು ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಶಿವಸೇನೆ ಶಿಂಧೆ ಗುಂಪು ಸೇರಲು ಪ್ರಯತ್ನ ಆರಂಭಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಶಾಸಕ ಅಮೀನ್ ಪಟೇಲ್, ಅವರು ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕರ್ತರೊಂದಿಗೆ ಚರ್ಚೆ: ಈ ನಡುವೆ ಮಾಜಿ ಸಂಸದ ಮಿಲಿಂದ್ ದಿಯೋರಾ, ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಕಾರ್ಪೊರೇಟರ್‌ಗಳು, ಜನಪ್ರತಿನಿಧಿಗಳು ಮತ್ತು ತಮ್ಮ ಲೋಕಸಭಾ ಕ್ಷೇತ್ರದ ಶಾಸಕ ಅಮೀನ್ ಪಟೇಲ್ ಅವರೊಂದಿಗೆ ಮಾತುಕತೆ ಹಾಗೂ ಚರ್ಚೆ ನಡೆಸಿದ್ದಾರೆ. ಸದ್ಯ ಮಿಲಿಂದ್ ದಿಯೋರಾ ಪಕ್ಷದ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಾನು ಎಲ್ಲಿಯೂ ಹೋಗುವುದಿಲ್ಲ- ಶಾಸಕ ಪಟೇಲ್:ಶಿಂಧೆ ಶಿವಸೇನೆ ಪ್ರವೇಶಿಸಲು ಮಿಲಿಂದ್ ದಿಯೋರಾ ಅವರೊಂದಿಗೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ, ಶಾಸಕ ಅಮೀನ್ ಪಟೇಲ್ ನೇರ ಉತ್ತರ ನೀಡದೇ ನುಣುಚಿಕೊಂಡರು. ಕೆಲವು ಚರ್ಚೆಗಳು ನಡೆಯುತ್ತಿವೆ ಎಂದಷ್ಟೇ ಹೇಳಿದರು. ನಾನು ಕಾಂಗ್ರೆಸ್ ಶಾಸಕ ಮತ್ತು ನಾನು ಕಾಂಗ್ರೆಸ್‌ನಲ್ಲಿದ್ದೇನೆ, ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಇದೇ ವೇಳೆ ಶಾಸಕ ಪಟೇಲ್ ಸ್ಪಷ್ಟಪಡಿಸಿದರು.
ಮಿಲಿಂದ್ ದಿಯೋರಾ ಪಕ್ಷಕ್ಕೆ ಬಂದರೆ ಸ್ವಾಗತ - ಸಮಂತ್: ಮತ್ತೊಂದೆಡೆ, ಮಿಲಿಂದ್ ದಿಯೋರಾ ಶಿವಸೇನೆ ಶಿಂಧೆ ಗುಂಪಿಗೆ ಸೇರುವ ಬಗ್ಗೆ ಸಚಿವ ಉದಯ್ ಸಮಂತ್ ಬಲವಾದ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಜನರಿಗಾಗಿ ಕೆಲಸ ಮಾಡುವ ನಾಯಕ, ಅವರು ನಿರಂತರವಾಗಿ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಮುಂಬೈನಂತಹ ಭಾಗದಲ್ಲಿ ಜನರಿಗಾಗಿ ದುಡಿಯುವ ನಾಯಕ ಎಂದೇ ಹೆಸರಾಗಿರುವ ಮಿಲಿಂದ್ ದಿಯೋರಾ ಅವರ ಬೆಂಬಲ ಸಿಕ್ಕರೆ ಖಂಡಿತವಾಗಿಯೂ ನಮಗೆ ಸಂತೋಷವಾಗುತ್ತದೆ. ಮಿಲಿಂದ್ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರೆ ನಾವು ಖಂಡಿತವಾಗಿಯೂ ಅವರನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಉದಯ್ ಸಮಂತ್ ಹೇಳಿದ್ದಾರೆ.
ಇದನ್ನು ಓದಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷ ಪಟ್ಟ