ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಖ್ಯಾತ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ ಸೇರಿ 50ಕ್ಕೂ ಹೆಚ್ಚು ಗಣ್ಯರಿಗೆ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಹಾಗೂ ನಂತರ ಬಿಜೆಪಿ ಸೇರಿರುವ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ:ಪದ್ಮ ಪ್ರಶಸ್ತಿ ಪುರಸ್ಕೃತರ ಬಗ್ಗೆ ಓದಿ ತಿಳಿದುಕೊಳ್ಳಿ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರದಾನ ಮಾಡಿದರು. ಜನವರಿ 26ರ ಗಣರಾಜ್ಯೋತ್ಸವದ ಮುನ್ನ ದಿನದಂದು 106 ದೇಶದ ಉನ್ನತ ನಾಗರಿಕ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಇಂದು ಎಸ್ಎಂ ಕೃಷ್ಣ ಮತ್ತು ಹೆಸರಾಂತ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ (ಮರಣೋತ್ತರ) ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರದಾನ ಮಾಡಲಾಯಿತು.
ಖ್ಯಾತ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ, ದೆಹಲಿ ಮೂಲದ ಪ್ರೊಫೆಸರ್ ಕಪಿಲ್ ಕಪೂರ್, ಆಧ್ಯಾತ್ಮಿಕ ನಾಯಕ ಕಮಲೇಶ್ ಡಿ ಪಟೇಲ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಲಾಯಿತು. ಕಳೆದ ವರ್ಷ ನಿಧನರಾದ ಬಿಲಿಯನೇರ್ ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್ ಜುನ್‌ಜುನ್‌ವಾಲಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.