ಜೈಪುರ( ರಾಜಸ್ಥಾನ): ಬ್ರಿಟಿಷ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಾಜಧಾನಿ ಜೈಪುರಕ್ಕೆ ಭೇಟಿ ಕೊಟ್ಟಿದ್ದಾರೆ. ಜೈಪುರದಲ್ಲಿರುವ ಎಲ್ಲ ಪ್ರವಾಸಿ ಸ್ಥಳಗಳಿಗೆ ಅವರು ಭೇಟಿ ನೀಡಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೇ ಪ್ರವಾಸಿಗರು ಸಹ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.
ಬೋರಿಸ್ ಜಾನ್ಸನ್ ಗುರುವಾರ ವಿಶ್ವವಿಖ್ಯಾತ ಅಮೇರ್ ಮಹಲ್ ಮತ್ತು ಜೈಗಢ ಕೋಟೆಗೆ ಭೇಟಿ ನೀಡಿದ್ದಾರೆ. ಇವರ ಜೊತೆ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಸಹ ಹಾಜರಿದ್ದರು. ನಂತರ ಅಲ್ಲಿನ ದಿವಾನ್-ಎ-ಆಮ್, ದಿವಾನ್-ಎ-ಖಾಸ್, ಗಣೇಶ್ ಪೋಲ್, ಶೀಶ್ ಮಹಲ್, ಮಾನ್ಸಿಂಗ್ ಮಹಲ್ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಿ ಇಲ್ಲಿನ ಇತಿಹಾಸದ ಬಗ್ಗೆ ಕೇಳಿ ತಿಳಿದುಕೊಂಡರು.
ಅರಮನೆಯ ವಾಸ್ತುಶಿಲ್ಪ ಮತ್ತು ಮಹಲ್ ನ ಸೌಂದರ್ಯವನ್ನು ಜಾನ್ಸನ್ ಇದೇ ವೇಳೆ ಶ್ಲಾಘಿಸಿದರು. ಅಲ್ಲದೇ ಸಾಮಾನ್ಯ ಪ್ರವಾಸಿಗರಂತೆ ಈ ಎಲ್ಲ ಅದ್ಭುತ ಕ್ಷಣಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ನಂತರ ಬ್ರಿಟನ್ನ ಮಾಜಿ ಪ್ರಧಾನಿಗಳು ಸುರಂಗದ ಮೂಲಕ ಜೈಘರ್ ಕೋಟೆಗೆ ಕಾಲ್ನಡಿಗೆಯಲ್ಲೇ ತೆರಳಿದರು. ಸುಮಾರು ಒಂದೂವರೆಗಂಟೆಗಳ ಕಾಲ ಕಾಲ್ನಡಿಗೆಯಲ್ಲೇ ಸುರಂಗದಲ್ಲಿ ಹೆಜ್ಜೆ ಹಾಕಿದ ಅವರು ಕೋಟೆಯ ವೈಭವ ಕಣ್ತುಂಬಿಕೊಂಡರು.