ಡೆಹ್ರಾಡೂನ್(ಉತ್ತರಾಖಂಡ):ಬಿಜೆಪಿಯು ವಿಧಾನಸಭೆ ಸ್ಥಾನಗಳನ್ನು ಭಾರಿ ಬೆಲೆ ಮಾರಾಟ ಮಾಡುತ್ತಿದೆ ಎಂದು ಉತ್ತರಾಖಂಡ ಮಾಜಿ ಶಾಸಕರಾದ ಧನ್ ಸಿಂಗ್ ನೇಗಿ ಮತ್ತು ರಾಜ್‌ಕುಮಾರ್ ತುಕ್ರಾಲ್ ಆರೋಪಿಸಿದ್ದಾರೆ. ಗುರುವಾರ ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಂತೆ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್‌ಗೆ ಸೇರಿದ ಕೆಲವೇ ಗಂಟೆಗಳಲ್ಲಿ ನೇಗಿ ಅವರು ತಮ್ಮ ಹಿಂದಿನ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಹಣಕ್ಕಾಗಿ ಅಭ್ಯರ್ಥಿಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನೇಗಿ, ತೆಹ್ರಿ ವಿಧಾನಸಭಾ ಕ್ಷೇತ್ರದ ಟಿಕೆಟ್ನ್ನು ಬಿಜೆಪಿ 10 ಕೋಟಿ ರೂ.ಗೆ ಮಾರಾಟ ಮಾಡಿದೆ. ಬಿಜೆಪಿಯು 'ಟಿಕೆಟ್ ಮಾರಾಟ ಪಕ್ಷ' (ticket selling party) ಎಂದು ಜರಿದಿದ್ದಾರೆ.
ಕೋಟ್ಯಂತರ ರೂಪಾಯಿ ಕೊಟ್ಟು ಪಕ್ಷದಿಂದ ಟಿಕೆಟ್ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ನನ್ನಲ್ಲಿದೆ ಎಂದಿರುವ ಮಾಜಿ ಶಾಸಕರು, ಇನ್ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಗಟ್ಟಿಗೊಳಿಸುವುದೇ ತಮ್ಮ ಕೆಲಸ ಎಂದು ಹೇಳಿದ್ದಾರೆ.